ಬೆಂಗಳೂರು, ಅ.05 (DaijiworldNews/HR): ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರಕಾರಕ್ಕೆ ಅನಾದರ ಏಕೆ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾ ಸೋಂಕಿನಿಂದ ತತ್ತರಿಸಿರುವ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಮೇಲೆ ಸರಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳ ಆಗಿದೆ. ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ" ಎಂದಿದ್ದಾರೆ.
"ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರ್ಕಾರ ಅವರನ್ನು ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ" ಎಂದರು.
"ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ" ಎಂದು ಹೇಳಿದ್ದಾರೆ.