ರಂಗಾರೆಡ್ಡಿ, ಅ. 05 (DaijiworldNews/HR): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ನಲ್ಲಿ ಮೊಬೈಲ್ನಲ್ಲಿ ಗೇಮ್ ಆಡಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಕೌಶಿಕಿ (17) ಎಂದು ಗುರುತಿಸಲಾಗಿದೆ.
ಕೌಶಿಕಿ ದ್ವಿತೀಯ ಪಿಯು ವಿದ್ಯಾರ್ಥಿನಿ ಆಗಿದ್ದು, ಅಪ್ಪನ ಮೊಬೈಲ್ ತೆಗೆದುಕೊಂಡು ಯಾವಾಗಲೂ ಗೇಮ್ ಆಡುತ್ತಿದ್ದಳು. ಹೀಗೆ ಗೇಮ್ ಆಡುತ್ತಿರುವಾಗ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿತ್ತುಕೊಂಡಿದ್ದರು.
ಇನ್ನು ಅಪ್ಪ ಬೈದಿದ್ದರಿಂದ ಬೇಸರಗೊಂಡಿದ್ದ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಬೆಡ್ರೂಮ್ಗೆ ತೆರಳಿ ಲಾಕ್ ಹಾಕಿಕೊಂಡಿದ್ದು. ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡ ಮಲಗಿದ್ದಳು. ಇದರ ನಡುವೆ ತಾಯಿ ಕಿಟಕಿ ಬಾಗಿಲು ಬಡಿದಿದ್ದಾಳೆ. ಇದರಿಂದ ಎಚ್ಚರಗೊಂಡ ಸಹೋದರಿ ಎದ್ದು ನೋಡಿದಾಗ ಅಕ್ಕ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಕಿರಿಚಿದ್ದಾಳೆ.
ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೌಶಿಕಿ ಕೊನೆಯುಸಿರೆಳೆದಿದ್ದಾಳೆ.
ಈ ಬಗ್ಗೆ ಮೀರ್ಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.