ಶಿವಮೊಗ್ಗ, ಅ. 05 (DaijiworldNews/HR): ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂ. ವಂಚನೆ ಮಾಡಿರುವುದಕ್ಕೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಠಲ ರಾವ್, ಮಹೊಮ್ಮದ್ ಮುಫಾಸಿರ್, ಮಂಜುನಾಥ, ಕಾಜಿವಲೀಸ್, ಮೊಹಮ್ಮದ್ ರೆಹಮಾನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೈಸೂರಿನ ಸಿವಿಲ್ ಎಂಜಿನಿಯರ್ ರಾಜೇಶ್ ಎಂಬುವವರಿಗೆ ನೂರು ಕೋಟಿ ರೂ. ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ.
ಇನ್ನು ಈ ಲೋನ್ ವಿಲ್ಲಾ ಪ್ರಾಜೆಕ್ಟ್ ಗಾಗಿ ಕೊಡಿಸುವುದಾಗಿ ತಿಳಿಸಲಾಗಿತ್ತು. ಇದಕ್ಕಾಗಿ ಐವರು ಆರೋಪಿಗಳು ಹತ್ತು ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
106 ವಾಟರ್ ಆರ್.ಒ. ಪ್ಲ್ಯಾಂಟ್ ಕೊಡಿಸುವುದಾಗಿ ಶಿವಮೊಗ್ಗದ ಗುತ್ತಿಗೆದಾರ ಲಕ್ಷ್ಮಣ್ ಎಂಬುವವರಿಗೆ ವಂಚಿಸಲಾಗಿದ್ದು, ಲಕ್ಷ್ಮಣ್ ಅವರಿಂದ 26.25 ಲಕ್ಷ ರೂ. ಹಣ ಪಡೆದುಕೊಂಡು ವಂಚನೆ ಮಾಡಲಾಗಿದೆ. ಆರ್.ಒ ಪ್ಲ್ಯಾಂಟ್ ಕೊಡಿಸದೆ ಇರುವಾಗ ಹಣ ಕೇಳಿದಾಗ ಲಕ್ಷ್ಮಣ್ ಅವರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಎರಡು ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಅವರ ಆಪ್ತರು ಎಂದು ಬಿಂಬಿಸಿಕೊಂಡಿದ್ದು, ಇದನ್ನು ನಂಬಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಅವರು ಹಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.