ಬೆಂಗಳೂರು, ಅ. 05 (DaijiworldNews/HR): ಬಿಜೆಪಿ ಇಂದು ಗೂಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಭಾರತ ಅಹಿಂಸಾ ಹೋರಾಟದ ತಾಯ್ನೆಲ. ದೇಶ ಬ್ರಿಟಿಷ್ ದಾಸ್ಯದಿಂದ ಬಿಡುಗಡೆಯಾಗಿದ್ದು ಅಹಿಂಸಾ ಹೋರಾಟದ ಮೂಲಕವೇ. ನೋಬೆಲ್ ಪುರಸ್ಕೃತ ಮಂಡೇಲಾ ಹೋರಾಟಕ್ಕೂ ಪ್ರೇರಣೆಯಾಗಿದ್ದು ಗಾಂಧಿಜೀಯವರ ಅಹಿಂಸಾ ಹೋರಾಟವೇ ಹೊರತು ಗೋಡ್ಸೆಯ ನೆತ್ತರ ಪರಂಪರೆಯಲ್ಲ. ಆದರೆ ಬಿಜೆಪಿ ಇಂದು ಗೂಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ" ಎಂದಿದ್ದಾರೆ.
ಇನ್ನು "ಸತ್ಯಾಗ್ರಹ ಯಾವಾಗಲೂ ಸತ್ಯದ ಮಾರ್ಗದ ಮೂಲಕ ನ್ಯಾಯ ಪಡೆಯುವ ಚಳವಳಿ. ದೇಶದ ರೈತರು ಕಳೆದ ಒಂದು ವರ್ಷದಿಂದ ಸತ್ಯಾಗ್ರಹದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ಯುಪಿಯ ರಾಜ್ಯ ಸರ್ಕಾರ ರೈತರನ್ನು ಕೊಲ್ಲುವ ಮೂಲಕ ಚಳವಳಿ ಹತ್ತಿಕ್ಕುವ ಯತ್ನ ಮಾಡುತ್ತಿದೆ. ರೈತರ ನ್ಯಾಯದ ಹೋರಾಟವನ್ನು ದಮನ ಮಾಡುವ ಪ್ರಯತ್ನವಿದು" ಎಂದು ಹೇಳಿದ್ದಾರೆ.