ಲಕ್ನೋ, ಅ 05 (DaijiworldNews/MS): ಲಿಖಿಂಪುರ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬದ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಿನ್ನೆಯಿಂದ ಸೀತಾಪುರ ಬಳಿಯ ಸರ್ಕಾರಿ ವಸತಿ ಗೃಹದಲ್ಲಿ ಇರಿಸಲಾಗಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ನೋ ಭೇಟಿ ನೀಡಿ, ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಆಯೋಜಿಸಲಾಗಿರುವ 'ಆಜಾದಿ@75: ನವ ನಗರ ಭಾರತ - ನಗರ ಒಳಪ್ರದೇಶ ಪರಿವರ್ತನೆ ' ಎಂಬ ಸಮ್ಮೇಳನ ಮತ್ತು ಎಕ್ಸ್ಪೋವನ್ನು ಉದ್ಘಾಟಿಸಲಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಮೋದಿ ಸರ್, ನಿಮ್ಮ ಸರ್ಕಾರ ಯಾವುದೇ ಎಫ್ಐಆರ್ ಇಲ್ಲದೆ ನನ್ನನ್ನು 28 ಗಂಟೆಗಳಿಂದ ಬಂಧನದಲ್ಲಿರಿಸಿದೆ ಎಂದು ವಿಡಿಯೋ ಮಾಡಿದ ಅವರು ರೈತರ ಪ್ರತಿಭಟನೆಯಲ್ಲಿ ರೈತರ ಮೇಲೆ ವಾಹನ ಚಲಾಯಿಸುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.ಯಾವುದೇ ಆದೇಶವಿಲ್ಲದೆ ಪ್ರತಿಪಕ್ಷದವರನ್ನು ಏಕೆ ಬಂಧಿಸಲಾಗಿದೆ. ಅಂತಹ ಭಯಾನಕ ಅಪರಾಧ ಮಾಡಿದ ವ್ಯಕ್ತಿಯನ್ನು ಏಕೆ ಬಂಧಿಸಲಾಗಿಲ್ಲ. ನಮ್ಮಂತಹ ವ್ಯಕ್ತಿಗಳನ್ನು ಬಿಟ್ಟು ಅಪರಾಧಿಗಳನ್ನು ಬಂಧಿಸಿ ಮೋದಿಜೀ' ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ರೈತರ ಸಾವಿಗೆ ಕಾರಣವಾದ ನಿಮ್ಮ ಮಂತ್ರಿಯನ್ನು ವಜಾ ಮಾಡಿ ಆತನ ಮಗನನ್ನು ಬಂಧಿಸದಿದ್ದಾಗ ಲಖನೌದಲ್ಲಿ ಸ್ವಾತಂತ್ರ್ಯೋವ ಆಚರಿಸಲು ನಿಮಗೆ ಯಾವ ನೈತಿಕ ಅಧಿಕಾರವಿದೆ? ಈ ಸರ್ಕಾರಕ್ಕೆ ನೈತಿಕ ಅಧಿಕಾರವಿಲ್ಲ' ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿದ್ದರು.ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ವಾಹನಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದು, ನಾಲ್ವರು ರೈತರು ಸಾವಿಗೀಡಾಗಿದ್ದರು. ಆಕ್ರೋಶಗೊಂಡ ರೈತರು ಎರಡೂ ವಾಹನಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿದಾಗ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಮತ್ತು ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ, ಮೃತ ರೈತರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ತಲಾ ₹ 45 ಲಕ್ಷ ಪರಿಹಾರ ಘೋಷಿಸಿದೆ.