ಹುಬ್ಬಳ್ಳಿ, ಅ. 05 (DaijiworldNews/HR): ಒಂದು ಕಾಲಘಟ್ಟದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಆಡಳಿತ ಇತ್ತು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆಗೆ ಒತ್ತಾಯಿಸಿ ಸಾಧು, ಸಂತರ ದೊಡ್ಡ ಪ್ರತಿಭಟನೆ ನಡೆದಿದ್ದು, ಆಗ ನಾಲ್ಕು ಸಾಧುಗಳಿಗೆ ಗುಂಡು ಹೊಡೆದು ಕೊಲ್ಲಲಾಗಿತ್ತು ಇದು ಸಿದ್ದರಾಮಯ್ಯರಿಗೆ ನೆನಪಿರಲಿಲ್ಲವೇ? ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
'ಬಿಜೆಪಿಯದ್ದು ಕೊಲೆಗಡುಕ ಮನಸ್ಥಿತಿ' ಎಂದು ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, "ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರದ್ದೇ ಕೊಲೆಗಡುಕ ಸರ್ಕಾರವಾಗಿತ್ತು" ಎಂದು ತಿರಗೇಟು ನೀಡಿದರು.
ಇನ್ನು ಉಪಚುನಾವಣೆ ವಿಚಾರದಲ್ಲಿ ವಿಜಯೇಂದ್ರ ಅವರನ್ನು ಕೈಬಿಟ್ಟು ಮತ್ತೆ ಪಟ್ಟಿಗೆ ಸೇರಿಸಿಕೊಂಡ ವಿಚಾರವಾಗಿ ಮಾತನಾಡಿದ ಅವರು, "ಬಿಜೆಪಿಯಲ್ಲಿ ಯಾವುದೇ ಕಿತ್ತಾಟವಿಲ್ಲ. ಇನ್ನೆರಡು ದಿನದಲ್ಲಿ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಹಲವಾರು ಜನರನ್ನು ಸೇರಿಸಲು ಚಿಂತನೆ ನಡೆಸಿದ್ದಾರೆ" ಎಂದರು.