ಹಾಸನ, ಅ.04 (DaijiworldNews/PY): "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನಮ್ಮ ಜಿಲ್ಲೆಯನ್ನು ಕಡೆಗಣಿಸಲಾಗಿದ್ದು, ಯೋಜನೆಗಳಿಗೆ ತಡೆ ನೀಡಲಾಗಿದೆ" ಎಂದು ಶಾಸಕ ಹೆಚ್ ಡಿ ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, "ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭ ನಮ್ಮ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ಜಾರಿ ಮಾಡಲು ಬಿಡಲಿಲ್ಲ. ಈಗ ನೂತ ಸಿಎಂ ಬಸವರಾಜ ಬೊಮ್ಮಾಯಿ ಅವರು ಏನು ಮಾಡುತ್ತಾರೋ ತಿಳಿದಿಲ್ಲ. ನಮ್ಮ ಜಿಲ್ಲೆಗೆ ನೀಡುವ ಅನುದಾನದಲ್ಲೂ ಕೂಡಾ ಸಮಸ್ಯೆ ಮಾಡಿದ್ದಾರೆ. ರಾಜ್ಯ ಸರ್ಕಾರ ಪಾಪರ್ ಆಗಿದೆ" ಎಂದಿದ್ದಾರೆ.
"ನೆಹರು ಕಾಲದಲ್ಲಿದ್ದ ಕಾಂಗ್ರೆಸ್ ಈಗಿಲ್ಲ. ಈಗ ಇರುವುದು ಕೇವಲ ಡೋಂಗಿ ಕಾಂಗ್ರೆಸ್, ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ 60 ವರ್ಷಗಳ ಕಾಲ ದೇಶ ಆಳಿದೆ. ಆದರೆ, ಇದರಿಂದ ಯಾರಿಗೆ ಸಹಾಯ ಆಗಿದೆ?. ಅಲ್ಪಸಂಖ್ಯಾತರಿಂದ ಮತ ಹಾಕಿಸಿಕೊಳ್ಳಲು ಮಾತ್ರವೇ ಹೇಳಿಕೆಗಳನನ್ನು ನೀಡುತ್ತಾರೆಯೇ ವಿನಃ ಅವರಿಗೆ ಯಾವುದೇ ಅವಕಾಶವನ್ನೂ ನೀಡುವುದಿಲ್ಲ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಕಾಂಗ್ರೆಸ್ಗೆ ತಾಕತ್ತಿದ್ದರೆ ಒಕ್ಕಲಿಗರು, ಲಿಂಗಾಯಿತರನ್ನು ಹೊರತುಪಡಿಸಿ ಬೇರೆವರಿಗೆ ಸಿಎಂ ಸ್ಥಾನ ನೀಡಲಿ. ಹಿಂದುಳಿದ ವರ್ಗದವರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ" ಎಂದು ಸವಾಲೆಸೆದಿದ್ದಾರೆ.