ನವದೆಹಲಿ, ಅ.04 (DaijiworldNews/PY): "ಕೃಷಿ ಕಾಯ್ದೆಗಳಿಗೆ ತಡೆ ನೀಡಿಲಾಗಿದ್ದು, ಕಾನೂನು ಜಾರಿಗೆ ಬಾರದೆ ಇರುವ ವೇಳೆ ಏಕೆ ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ?" ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ನ್ಯಾಯಮೂರ್ತಿಗಳಾದ ಎ. ಎಂ. ಖಾನ್ವಿಲ್ಕರ್ ಹಾಗೂ ಸಿ ಟಿ ರವಿಕುಮಾರ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಈ ಬಗ್ಗೆ ಪ್ರಶ್ನಿಸಿದ್ದು, "ಈಗಾಗಲೇ ಮೂರು ಕೃಷಿ ಕಾಯ್ದೆಗಳಿಗೆ ತಡೆ ನೀಡಲಾಗಿದೆ. ಹಾಗಾಗಿ ಪ್ರತಿಭಟನೆ ನಡೆಸುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ?" ಎಂದು ಕೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಉಲ್ಲೇಖಿಸಿದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, "ಈ ರೀತಿಯಾದ ಘಟನೆಗಳು ಸಂಭವಿಸಿದ ಸಂದರ್ಭ ಯಾರೂ ಕೂಡಾ ಅದರ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ" ಎಂದಿದ್ದಾರೆ.
"ಯಾರಾದರೂ ಒಂದು ವಿಚಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರೆ, ಅದೇ ವಿಚಾರವಾಗಿ ಅವರು ಬೀದಿಗಿಳಿಯುವಂತಿಲ್ಲ" ಎಂದು ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.