ಕಲಬುರ್ಗಿ, ಅ.04 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಚಿಲ್ಲರೆ ಮನುಷ್ಯ ಅವರ ಮಾತಿಗೆ ಬೆಲೆ ಕೊಡಬೇಡಿ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ, "ಪ್ರಧಾನಿ ನರೇಂದ್ರ ಮೋದಿ ಅವರು ಚಿಲ್ಲರೆ ಮನುಷ್ಯ ಅಲ್ಲ. ಅವರು ಚಿನ್ನದ ಗಟ್ಟಿ" ಎಂದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಾಯ್ತಪ್ಪಿ ಹೇಳಿಕೆ ನೀಡಿದ್ದಲ್ಲಿ ಅವರು ಕ್ಷಮೆಯಾಚಿಸಲಿ. ಇಲ್ಲವಾದಲ್ಲಿ ಪ್ರಧಾನಿ ಮೋದಿ ಚಿಲ್ಲರೆ ಎಂದಿದಕ್ಕೆ ವಿವರಣೆ ನೀಡಬೇಕು" ಎಂದು ಹೇಳಿದ್ದಾರೆ.
"ಖರ್ಗೆ ಅವರು ಪ್ರಧಾನಿ ಮೋದಿ ಬಗ್ಗೆ ಮಾತನಾಡಿರುವುದು ನನಗೆ ತುಂಬಾ ನೋವಾಗಿದೆ. ಜಗತ್ತೇ ಮೆಚ್ಚಿದ ನಾಯಕನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಈ ರೀತಿಯಾಗಿ ಮಾತನಾಡಬಾರದಿತ್ತು. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಅವರು ಕ್ಷಮೆ ಕೇಳಿದರೆ ಅವರ ಗೌರವ ಇನ್ನಷ್ಟು ಹೆಚ್ಚಲಿದೆ" ಎಂದಿದ್ದಾರೆ.
"ಬಿಜೆಪಿ ಶಾಸಕರು ಮಾರಾಟದ ವಸ್ತುಗಳಲ್ಲ, ಅವರು ಸಿಂಹ ಇದ್ದಹಾಗೆ. ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮಾತೇ ಇಲ್ಲ" ಎಂದು ತಿಳಿಸಿದ್ದಾರೆ.