ಬೆಂಗಳೂರು, ಅ.04 (DaijiworldNews/HR): ರೈತರ ಶವವನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವ ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿಯಿದೆಯೇ? ಇದ್ದಿದ್ದರೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾದಾಗ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಏಕೆ ಸಾಂತ್ವನ ಹೇಳಲಿಲ್ಲ? ಆಗವರು ಇಟಲಿಯ ಪ್ರವಾಸದಲ್ಲಿದ್ದರೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶದ ಲಖಿಂಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಮುಂದುವರೆದಿದ್ದು, ಈ ಬಗ್ಗೆ ಟ್ವೀಟ್ ಮಡಿರುವ ಕರ್ನಟಕ ಬಿಜೆಪಿ, "ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ವಿಡಿಯೋ ನೋಡಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಮೇಲೆ ತಾಲಿಬಾನಿ ಶೈಲಿಯಲ್ಲಿ ಹಲ್ಲೆ ನಡೆಸಿತ್ತು. ಅನ್ನದಾತರ ಮೇಲೆ ಈ ಮೃಗೀಯ ದಾಳಿ ನಡೆಸಿದ್ದ ಸಿದ್ದರಾಮಯ್ಯ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ" ಎಂದಿದೆ.
ಇನ್ನು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, "ನಕಲಿ ಪ್ರಜಾಪ್ರಭುತ್ವವಾದಿ ಸಿದ್ದರಾಮಯ್ಯ ಅವರಿಗೆ ಚುನಾಯಿತ ಸರ್ಕಾರವನ್ನು ಬುಡಮೇಲುಗೊಳಿಸಿ ಎಂದು ಆಗ್ರಹಿಸುವುದರಿಂದ ವಿಕೃತ ಆನಂದ ಲಭಿಸುತ್ತದೆಯೇ? ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ವಿಚಾರದಲ್ಲಿ ಪಿಎಚ್ಡಿ ಪಡೆದ ನಕಲಿ ಗಾಂಧಿ ಕುಟುಂಬದ ಸೇವಕರಿಂದ ಇನ್ನೇನು ನಿರಿಕ್ಷೆ ಮಾಡಲು ಸಾಧ್ಯ?" ಎಂದು ಪ್ರಶ್ನಿಸಿದೆ.
"ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ರೈತರ ಮೈ ನೀಲಿಗಟ್ಟುವಂತೆ ಹೊಡೆಸಿದ್ದು ರಾವಣನೋ, ಕೀಚಕನೋ? ರೈತ ಮಹಿಳೆಯರಿಗೆ ಬಡಿದು ಕಣ್ಣೀರು ಹರಿಸಿದ್ದು ದುರ್ಯೋಧನನೋ, ದುಶ್ಯಾಸನನೋ? ನಿಮ್ಮ ಬಳಿ ಉತ್ತರವಿದೆಯೇ ಡಿಕೆಶಿ?" ಎಂದು ಕೇಳಿದೆ.