ಮೈಸೂರು, ಅ.04 (DaijiworldNews/PY): "ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲೇ ಒಡೆದು ಹೋಗಿದೆ. ಅಲ್ಲಿ ನಾಯಕರು ಯಾರು ಎನ್ನುವುದೇ ತಿಳಿಯುತ್ತಿಲ್ಲ" ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
"ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರಲ್ಲಿ ನಡುಕ ಶುರುವಾಗಿದೆ. ಹಾಗಾಗಿ, ಬಿಜೆಪಿಯಿಂದ ಕೆಲವು ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ಸುದ್ದಿ ಹರಡಿದ್ದಾರೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ" ಎಂದಿದ್ದಾರೆ.
"ಕೊರೊನಾ ನಿಯಂತ್ರಣಕ್ಕೆ ಬಂದು ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ತಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪೂರ್ವ ಪ್ರಾಥಮಿಕ ಹಂತದಿಂದ ಜಾರಿಗೆ ತರಲಾಗುವುದು" ಎಂದು ತಿಳಿಸಿದ್ದಾರೆ.
"ಶಾಸಕ ರಾಮದಾಸ್ ಅವರು ನಮ್ಮ ಅಗ್ರಮಾನ್ಯ ನಾಯಕರಾಗಿದ್ದು, ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಉನ್ನತಸ್ಥಾನಮಾನಗಳು ದೊರಕಲಿವೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಚುನಾವಣೆ ಗೆಲ್ಲಬೇಡಿ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಎಲ್ಲಿಯೇ ಹೋದರೂ ನರೆಂದ್ರ ಮೋದಿ ಅವರೇ ಪ್ರಧಾನ ಮಂತ್ರಿ ಆಗಬೇಕು ಎಂದು ಜನರು ಹೇಳುತ್ತಿದ್ದಾರೆ" ಎಂದು ತಿಳಿಸಿದ್ದಾರೆ.