ಲಕ್ನೋ, ಅ 04 (DaijiworldNews/MS): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಸೀತಾಪುರದ ಅತಿಥಿಗೃಹದ ಕೋಣೆಯನ್ನು ಗುಡಿಸಿ ಸ್ವಚ್ಚಗೊಳಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ಈ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್, ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ನಿನ್ನೆ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಹಿಂಸಾಚಾರ ನಡೆದಿರುವ ಉತ್ತರ ಪ್ರದೇಶದ ಲಖಿಂಪುರ್ಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಕಾಂಗ್ರೆಸ್ ನಾಯಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಳಿಕ ಲಖನೌದಿಂದ 90 ಕಿ.ಮೀ ದೂರದ ಸೀತಾಪುರದ ಸರ್ಕಾರಿ ವಸತಿ ಗೃಹದಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಪ್ರಿಯಾಂಕಾ ಅವರು ಅಲ್ಲಿ ಕಸ ಗುಡಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಇನ್ನೊಂದೆಡೆ ವಸತಿ ಗೃಹದ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಅವರ ಗೃಹ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಾಹನಕ್ಕೆ ಸಿಲುಕಿ ನಾಲ್ವರು ಪ್ರತಿಭಟನಾನಿರತ ರೈತರು ಮೃತಪಟ್ಟಿದ್ದರೆನ್ನಲಾಗಿತ್ತು. ಹಾಗೂ ನಂತರ ನಡೆದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಇದು ಈ ಪ್ರದೇಶದಲ್ಲಿ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಯಿತು. ಇದನ್ನು ತಿಳಿದ ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ತಕ್ಷಣವೇ ಲಖಿಂಪುರ್ ಖೇರಿಗೆ ತೆರಳಿದ್ದರು. ಆದರೆ ಹಿಂಸಾಚಾರ ಪೀಡಿತ ಪ್ರದೇಶವನ್ನು ತಲುಪುವ ಮೊದಲು ಅವರನ್ನು ಸೀತಾಪುರದಲ್ಲಿ ಬಂಧಿಸಲಾಯಿತು.