ಚಿಕ್ಕಮಗಳೂರು, ಅ.04 (DaijiworldNews/PY): "ದತ್ತ ಪೀಠ ಹಾಗೂ ನಾಗೇನಹಳ್ಳಿ ಬಾಬಾ ಬುಡಾನ್ ದರ್ಗಾ ಬೇರೆ ಬೇರೆ ಎನ್ನುವುದು ದಾಖಲೆಗಳಿಂದ ಮತ್ತೆ ಮತ್ತೆ ಸಾಬೀತಾಗಿದ್ದು, ಈ ಬಗ್ಗೆ ಮುಸಲ್ಮಾನರು ಕಣ್ತೆರೆದು ನೋಡಬೇಕು" ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ದತ್ತಪೀಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, "ದತ್ತಪೀಠ ಹೋರಾದ ಮೂಲಕವೇ ನಾನು ಸಾರ್ವಜನಿಕ ಜೀವನಕ್ಕೆ ಬಂದವನು. ಮಂತ್ರಿಯಾದ ವೇಳೆಯಲ್ಲೇ ಕೋರ್ಟ್ ಈ ತೀರ್ಪನ್ನು ನೀಡಿರುವುದು ನನ್ನ ಜೀವನದ ಯೋಗ. ಈ ಹಿನ್ನೆಲೆ ನಾನು ಸಂತಸದಿಂದ ದತ್ತಾತ್ರೇಯನ ದರ್ಶನ ಮಾಡಿದ್ದು, ಇನ್ನಷ್ಟು ಹಿಂದುತ್ವದ ಪರ ಕೆಲಸ ಮಾಡುವಂತೆ ಬೇಡಿಕೊಂಡಿದ್ದೇನೆ" ಎಂದಿದ್ದಾರೆ.
"ನಾಗೇನಹಳ್ಳಿ ದರ್ಗಾವನ್ನು ಮುಸಲ್ಮಾನರು ಅಭಿವೃದ್ಧಿಪಡಿಸಕೊಳ್ಳಲಿ. ಅನಗತ್ಯವಾಗಿ ನಿರ್ಮಿಸಿರುವ ದರ್ಗಾಗಳನ್ನು ಇಲ್ಲಿಂದ ನಾಗೇನಹಳ್ಳಿಗೆ ಸ್ಥಳಾಂತರಿಸಿ. ಹಿಂದೂಗಳಿಗೆ ದತ್ತಪೀಠವನ್ನು ಮುಕ್ತವಾಗಿ ಪೂಜೆಗೆ ಬಿಡುವಂತೆ ಹೈಕೋರ್ಟ್ನ ಆದೇಶದ ಮೇರೆಗೆ ಸೂಚಿಸುತ್ತೇನೆ" ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಈ ಹಿಂದೆ ಹಿಂದೂಗಳ ವಿರುದ್ದವಾಗಿ ತೀರ್ಮಾನ ಕೈಗೊಂಡಿತ್ತು. ಸುಪ್ರೀಂ ಕೋರ್ಟ್ನ ಆದೇಶವಿದ್ದರೂ ಕೂಡಾ ಹಿಂದೂಗಳಿಗೆ ಪೂಜೆಗೆ ಅವಕಾಶವಿರಲಿಲ್ಲ. ಹಿಂದಿನ ಸರ್ಕಾರದ ಮುಜಾವರ್ ನೇಮಕವನ್ನು ಹೈಕೋರ್ಟ್ ರದ್ದು ಮಾಡಿದ್ದು, ದತ್ತ ಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ, ಪೂಜೆ ಹಿಂದೂ ಅರ್ಚಕರ ಮೂಲಕವೇ ಮಾಡಬೇಕು ಎಂಬ ರೂಪದಲ್ಲಿ ಆದೇಶಿಸಿದೆ.