ನವದೆಹಲಿ, ಅ.04 (DaijiworldNews/PY): "ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಅರ್ಜಿ ಸಲ್ಲಿಸಿದ 30 ದಿನದೊಳಗೆ 50 ಸಾವಿರ ರೂ. ಪರಿಹಾರ ನೀಡಬೇಕು" ಎಂದು ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ.
"ಸಾವಿಗೆ ಕಾರಣ ಕೊರೊನಾ ಎನ್ನುವುದು ಮರಣ ಪ್ರಮಾಣಪತ್ರದಲ್ಲಿ ನಮೂದಾಗಿಲ್ಲ ಎನ್ನುವ ಕಾರಣದಿಂದ ಯಾವುದೇ ರಾಜ್ಯ 50 ಸಾವಿರ ರೂ.ಗಳ ಪ್ರಯೋಜನವನ್ನು ನಿರಾಕರಿಸಬಾರದು. ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಪರಿಹಾರ ಮೊತ್ತವನ್ನು ವಿತರಿಸಬೇಕು" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
"ಪರಿಹಾರ ನೀಡುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರಗಳು ಹೆಚ್ಚಾಗಿ ಪ್ರಚಾರ ಮಾಡಬೇಕು" ಎಂದು ಸುಪ್ರೀಂ ಕೋರ್ಟ್ ನ್ಯಾ. ಎಂ. ಆರ್. ಶಾ ನೇತೃತ್ವದ ಪೀಠ ಸರ್ಕಾರಗಳಿಗೆ ತಿಳಿಸಿದೆ.
"ಹಣವನ್ನು ರಾಜ್ಯ ವಿಪತ್ತು ನಿಧಿಯಿಂದ ಪಾವತಿಸಲಾಗುವುದು. ಸಾವಿಗೆ ಕೊರೊನಾ ಕಾರಣ ಎಂದು ಪ್ರಮಾಣಿಕರಿಸಬೇಕು" ಎಂದು ನ್ಯಾಯಾಲಯ ತಿಳಿಸಿದೆ.
ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ. ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶಿಫಾರಸು ಮಾಡಿದೆ ಎಂದು ಕಳೆದ ತಿಂಗಳು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು. ಕೊರೊನಾ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿ, ಮೃತಪಟ್ಟ ಕುಟುಂಬದವರಿಗೂ ಪರಿಹಾರ ನೀಡಲಾಗುವುದು ಎಂದಿತ್ತು.