ನವದೆಹಲಿ, ಅ.04 (DaijiworldNews/PY): ಐಷಾರಾಮಿ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದೆ. ಸದ್ಯ ಆರ್ಯನ್ ಖಾನ್ ಎನ್ಸಿಬಿ ವಶದಲ್ಲಿದ್ದಾರೆ.
ಪುತ್ರನ ಬಂಧನವಾಗುತ್ತಿದ್ದಂತೆ ನಟ ಶಾರುಖ್ ಖಾನ್ ತಮ್ಮ ಪಠಾಣ್ ಚಿತ್ರದ ಶೂಟಿಂಗ್ ನಿಲ್ಲಿಸಿ ಮನೆಗೆ ವಾಪಾಸ್ಸಾಗಿದ್ದಾರೆ. ಈ ನಡುವೆ ಆರ್ಯನ್ ಖಾನ್ ಪರ ವಕೀಲರಾದ ಸತೀಶ್ ಮನಶಿಂಧೆ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆರ್ಯನ್ ಖಾನ್ ಅವರ ಬಳಿ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಅವರು ಹಡಗು ಪ್ರವೇಶಿಸುವ ವೇಳೆ ಸ್ಕ್ರೀನಿಂಗ್ ಮಾಡಲಾಗಿದ್ದು, ಏನೂ ಪತ್ತೆಯಾಗಿರಲಿಲ್ಲ ಎಂದಿದ್ದರು. ಆದರೆ, ಆರ್ಯನ್ ಖಾನ್ ಅವರ ಲೆನ್ಸ್ ಕೇಸ್ನಿಂದ ಡ್ರಗ್ಸ್ ವಶಪಡಿಸಕೊಳ್ಳಲಾಗಿದೆ ಎಂದು ಎನ್ಸಿಬಿ ಹೇಳಿದಾಗಿ ವರದಿಯಾಗಿದೆ.
ಎನ್ಸಿಬಿ ದಾಳಿಯ ವೇಳೆ ಆರ್ಯನ್ ಖಾನ್ ಸೇರಿದಂತೆ ಇನ್ನಿತರ ಹುಡುಗಿಯರನ್ನು ಬಂಧಿಸಲಾಗಿದೆ. ಆರ್ಯನ್ ಖಾನ್ ಅವರ ಲೆನ್ಸ್ ಕೇಸ್ ಡ್ರಗ್ಸ್ ಇದ್ದರೆ, ಕೆಲ ಯುವತಿಯರ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ಬಾಕ್ಸ್ನಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ತಿಳಿಸಿದ್ದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಆರ್ಯನ್ ಖಾನ್ಗೆ ಮಾದಕ ದ್ರವ್ಯದ ನಂಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಕೆಲವು ವಾಟ್ಸ್ಯಾಪ್ ಚಾಟ್ಗಳು ದೊರಕಿವೆ ಎನ್ನಲಾಗಿದೆ. ಆರ್ಯನ್ ಖಾನ್ ಸೇರಿದಂತೆ ಅವರ ಸ್ನೇಹಿತರು ಡ್ರಗ್ ಪೆಡ್ಲರ್ಗಳೊಂದಿಗೆ ಹಲವು ಬಾರಿ ವಾಟ್ಸ್ಯಾಪ್ ಚಾಟ್ ಮಾಡಿದ್ದು, ಎನ್ಸಿಬಿ ಇವೆಲ್ಲವನ್ನೂ ವಶಪಡಿಸಿಕೊಂಡಿದೆ.
ಬಂಧಿತ ಎಂಟು ಮಂದಿಯ ಪೈಕಿ ಆರ್ಯನ್ ಖಾನ್ ಸೇರಿದಂತೆ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಇದೀಗ ಅವರು ಎನ್ಸಿಬಿ ಕಸ್ಟಡಿಯಲ್ಲಿ ಇದ್ದಾರೆ. ಉಳಿದ ಐದು ಮಂದಿಯ ವೈದ್ಯಕೀಯ ತಪಾಸಣೆ ಆಗಬೇಕಿದ್ದು, ಇದಾದ ಕೂಡಲೇ ಅವರನ್ನೂ ಕೋರ್ಟ್ ಎದುರು ಹಾಜರುಪಡಿಸಲಿದೆ.