ರಾಮನಗರ, ಅ.04 (DaijiworldNews/HR): ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನ್ನು ಸೋಲಿಸುವುದಕ್ಕಾಗಿ ಉಪ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಲಾಗುತ್ತಿದೆ ಎಂಬುದು ಸುಳ್ಳು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಸ್ಲಿಮರನ್ನು ರಾಜಕೀಯ ಮುಖ್ಯವಾಹಿನಿಗೆ ಎಳೆತರುವುದೇ ಇಂದಿನ ಸವಾಲಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಪಕ್ಷದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ" ಎಂದರು.
ಇನ್ನು "ಬಸವಕಲ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಜೆಡಿಎಸ್ ಕಾರಣ ಎಂದು ಆರೋಪಿಸಲಾಗಿದ್ದು, ನಮ್ಮ ಸಮಾಜದವರನ್ನು ಸೋಲಿಸಲು ಬೇಕೆಂದೇ ಅಭ್ಯರ್ಥಿ ಹಾಕುತ್ತಿದ್ದೀರಿ ಎಂದು ಹಿಂದೊಮ್ಮೆ ಮುಸ್ಲಿಂ ಧರ್ಮಗುರುಗಳು ನನಗೆ ಕ್ಲಾಸ್ ತೆಗೆದುಕೊಂಡಿದ್ದರು. ಇಂತಹ ಸನ್ನಿವೇಶಗಳನ್ನು ಸಾಕಷ್ಟು ಎದುರಿಸಿದ್ದೇನೆ. ಸಿ.ಎಂ. ಇಬ್ರಾಹಿಂ, ಜಮೀರ್ ಅಹಮ್ಮದ್ರಂತಹ ನಾಯಕರನ್ನು ಗೆಲ್ಲಿಸುತ್ತಾ ಬೆಳೆಸಿದ್ದು ನಾವು" ಎಂದರು.
ಭಾರತದಲ್ಲಿ ನೆಹರೂ ಕಾಲದಿಂದಲೂ ಯಾವೊಂದು ಪಕ್ಷವೂ ಮುಸ್ಲಿಮರನ್ನು ತನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಜನತಾದಳ ಮಾತ್ರ ಆ ಕಾರ್ಯ ಮಾಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಬಳಸಿಕೊಂಡಿದೆ. ಆದರೆ ಅವರ ಏಳ್ಗೆಗೆ ಅಡ್ಡಿ ಮಾಡುತ್ತ ಬಂದಿದೆ ಎಂದು ಹೇಳಿದ್ದಾರೆ.