ಲಕ್ನೋ, ಅ.04 (DaijiworldNews/HR): ಸಚಿವರುಗಳ ಭೇಟಿ ವೇಳೆ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶೀಶ್ ಕೂಡ ಇದ್ದರು ಎಂದು ಹೇಳಲಾಗಿದ್ದು, ಆತನ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಮಾತ್ರವಲ್ಲದೆ ಇನ್ನೂ ಕೂಡಾ ಅನೇಕ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ರೈತ ಮುಖಂಡ ಡಾ. ದರ್ಶನ್ ಪಾಲ್, "ನಾವು ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ಘೇರಾವು ನಡೆಸಿ ಹಿಂದಕ್ಕೆ ತೆರಳುವ ವೇಳೆ ಕಾರುಗಳು ರೈತರ ಮೇಲೆಯೇ ಹರಿದು ಹೋಗಿದ್ದು, ಈ ವೇಳೆ ಕಾರಿನಲ್ಲಿ ಸಚಿವರ ಮಗನೂ ಇದ್ದ" ಎಂದು ಆರೋಪಿಸಿದ್ದಾರೆ.
ಇನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾವು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಎಫ್ಐಆರ್ ದಾಖಲು ಮಾಡುವಂತೆ ಆಗ್ರಹ ಮಾಡಿದ್ದರು.
ಈ ಕುರಿತು ಮಾತನಾಡಿದ ಸಚಿವರು, " ನಮ್ಮ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಚಾಲಕನಿಗೆ ಗಾಯವಾಗಿದೆ. ಹಾಗಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಳಿಕ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಕಾರಿಗೆ ಬೆಂಕಿ ಹಚ್ಚಲಾಗಿದೆ" ಎಂದು ಆರೋಪ ಮಾಡಿದ್ದಾರೆ.