ಬೆಂಗಳೂರು, ಅ.04 (DaijiworldNews/PY): ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ದ ನಡೆದ ರೈತರ ಪ್ರತಿಭಟನೆಯ ವೇಳೆ ಹಿಂಸಾಚಾರ ಭುಗಿಲೆದಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, "ರೈತವಿರೋಧಿ ಕೃಷಿ ಕಾಯ್ದೆಗಳ ವಿರೋಧಿ ಪ್ರತಿಭಟನೆಗೆ 10 ತಿಂಗಳು ಕಳೆದಿವೆ. ಇಷ್ಟು ದಿನಗಳಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು, ದಿಕ್ಕು ತಪ್ಪಿಸಲು, ಅಪರಾಧಿಗಳನ್ನಾಗಿಸಲು ಬಿಜೆಪಿ ಹಲವು ಕಸರತ್ತು ನಡೆಸಿತ್ತು. ಈಗ ಸ್ವತಃ ಕೇಂದ್ರ ಸಚಿವರೇ ಕಾರು ಹರಿಸಿ ರೈತರನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕೊಲೆಗಡುಕರ ಪಕ್ಷ ಎಂದರೆ ತಪ್ಪಾಗದು" ಎಂದು ಹೇಳಿದೆ.
"ಗಾಂಧಿಯವರ ಭೂಮಿಯಲ್ಲಿ ರೈತರ ರಕ್ತ ಚೆಲ್ಲಲಾಗಿದೆ. ಈ ಕ್ರಿಮಿನಲ್ಗಳು ನಮ್ಮ ತಾಯ್ನಾಡಿನ ಶಕ್ತಿಯನ್ನು ನೋಡುವ ಸಮಯ ಬಂದಿದೆ" ಎಂದಿದೆ.
"ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದಿದ್ದು, ಪರಿಣಾಮ ನಾಲ್ವರು ರೈತರು ಮೃತಪಟ್ಟಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ರೈತರು ಎರಡೂ ಎಸ್ಯುವಿಗಳನ್ನು ತಡೆದು ನಿಲ್ಲಿಸಿ ಬೆಂಕಿ ಹಚ್ಚಿದ್ದು, ಎಸ್ಯುವಿಗಳಲ್ಲಿ ಇದ್ದವರಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ" ಎಂದು ಲಖಿಂಪುರ-ಖೇರಿ ಜಿಲ್ಲಾಧಿಕಾರಿ ಅರವಿಂದ ಕುಮಾರ್ ಚೌರಾಸಿಯಾ ಹೇಳಿದ್ದರು.