ಬೆಂಗಳೂರು, ಅ.04 (DaijiworldNews/PY): ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಪ್ರಾರಂಭಗೊಂಡಿದ್ದರೂ ಕೂಡಾ ಬಿಸಿಯೂಟ ಯೋಜನೆ ಮಾತ್ರ ಆರಂಭವಾಗಿಲ್ಲ. ಈ ಹಿನ್ನೆಲೆ ದಸರಾ ರಜೆಯ ನಂತರ ಶಾಲೆಗಳಲ್ಲಿ ಬಿಸಿಯೂಟ ಪುನರಾರಂಭಗೊಳ್ಳುವುದಾಗಿ ತಿಳಿದುಬಂದಿದೆ.
ಈ ವಿಚಾರದ ಬಗ್ಗೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಉಪ ನಿರ್ದೇಶಕರಿಗೆ ಈಗಾಗಲೇ ಪತ್ರ ಬರೆದಿದ್ದು, ಯಾವುದಾದರೂ ಸಲಹೆ ಸೂಚನೆಗಳಿದ್ದಲ್ಲಿ ತಿಳಿಸುವಂತೆ ಮನವಿ ಮಾಡಿದೆ.
ಅ.10ರಿಂದ 20ರವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳೊಗೆ ರಜೆ ಘೋಷಿಸಲಾಗಿದೆ. ದಸರಾ ರಜೆ ಮುಗಿದು ಶಾಲೆಗಳು ಪ್ರಾರಂಭವಾದ ನಂತರ ಅಕ್ಟೋಬರ್ 21ರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೂ ಬಿಸಿಯೂಟ ಪುನರಾರಂಭಿಸುವ ಕುರಿತು ಚಿಂತನೆ ನಡೆಸಿದೆ.
ಪ್ರಸ್ತುತ ಶಾಲೆ ಪ್ರಾರಂಭವಾಗಿರುವ 6 ರಿಂದ 10ನೇ ತರಗತಿಗಳಿಗೆ ಶೇ.55ರಿಂದ 65ರಷ್ಟು ಮಕ್ಕಳು ಹಾಜರಾತಿಯೊಂದಿಗೆ 25ರಿಂದ 30 ಲಕ್ಷ ಮಕ್ಕಳು ಬರುತ್ತಿದ್ದಾರೆ. ಬಿಸಿಯೂಟ ಆರಂಭಿಸಿದರೆ, ಮತ್ತಷ್ಟು ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ಈ ಹಿನ್ನೆಲೆ ಶೀಘ್ರವೇ ಬಿಸಿಯೂಟವನ್ನು ಪುನರಾರಂಭಿಸಬೇಕು ಎನ್ನುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.