ನವದೆಹಲಿ, ಅ.03 (DaijiworldNews/HR): ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲೇ ಇರುವುದರಿಂದ ರಾಜ್ಯದಲ್ಲಿ 1ನೇ ತರಗತಿಯಿಂದಲೇ ಶಾಲೆ ಆರಂಭಿಸಬೇಕಿತ್ತು. ಈ ಕುರಿತು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಚಿಂತನೆ ನಡೆಸಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "2 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಮೂಗಿನಲ್ಲಿ ಹನಿಯ ರೂಪದಲ್ಲಿ ಹಾಕುವ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಭಾರತ್ ಬಯೋಟೆಕ್ ಕಂಪೆನಿಯು ಈ ಸಂಬಂಧ ನಡೆಸಿರುವ ಸಂಶೋಧನೆ ಅಂತಿಮ ಹಂತ ತಲುಪಿದ್ದು, ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದಿದೆ. ಇದಕ್ಕೆ ಮಾನ್ಯತೆ ದೊರೆತರೆ ಲಸಿಕೆಯನ್ನು ಇಂಜಕ್ಷನ್ ಮೂಲಕ ಪಡೆಯಲು ಆತಂಕ ಪಡುತ್ತಿರುವವರನ್ನು ಮೂಗಿನಲ್ಲಿ ಹನಿಯ ರೂಪದಲ್ಲಿ ಹಾಕಲಾಗುವುದು" ಎಂದರು.
ಇನ್ನು "ರಾಜ್ಯದಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ 1.48 ಕೋಟಿ ಡೋಸ್ ಕೊರೊನಾ ಲಸಿಕೆ ಹಾಕಲಾಗಿದ್ದು, 18ಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರವೇ ಅದಕ್ಕೆ ಅನುಮತಿ ದೊರೆಯುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.