ಬೆಂಗಳೂರು, ಅ.03 (DaijiworldNews/PY): "ಡಿ. ಕೆ. ರವಿ ಪ್ರಚಾರಪ್ರಿಯರಾಗಿದ್ದರು, 500 ಕೋಟಿ ಸಂಪಾದಿಸಬೇಕೆಂಬ ಅವರ ಆಸೆ ಈಡೇರಲಿಲ್ಲ, ಇದು ಅವರ ಜೀವನದ ವೈಫಲ್ಯ ಎಂದು ರವಿ ಅವರ ಬದುಕಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೀಳುಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಡಿ. ಕೆ. ರವಿ ಪ್ರಚಾರಪ್ರಿಯರಾಗಿದ್ದರು, 500 ಕೋಟಿ ಸಂಪಾದಿಸಬೇಕೆಂಬ ಅವರ ಆಸೆ ಈಡೇರಲಿಲ್ಲ, ಇದು ಅವರ ಜೀವನದ ವೈಫಲ್ಯ ಎಂದು ರವಿ ಅವರ ಬದುಕಿನ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೀಳುಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ನಡುವೆ ಇಲ್ಲದ ವ್ಯಕ್ತಿಗಳ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದು ಸದಭಿರುಚಿಯೇ, ಸಿದ್ದರಾಮಯ್ಯ?" ಎಂದು ಪ್ರಶ್ನಿಸಿದೆ.
"ಸದನದಲ್ಲಿ ಇಲ್ಲದ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸುವುದು ಸಂಸದೀಯ ನಡಾವಳಿಯಲ್ಲ ಎಂದು ಸಿದ್ದರಾಮಯ್ಯ ಅವರು ಹಲವು ಬಾರಿ ಹೇಳಿದ್ದರು. ಆದರೆ ಬದುಕಿಲ್ಲದ ವ್ಯಕ್ತಿಯನ್ನು ಧನದಾಹಿ ಎಂಬಂತೆ ಚಿತ್ರಿಸುವುದು ಯಾವ ನ್ಯಾಯ? ಸಿದ್ದರಾಮಯ್ಯನವರೇ, ಅಷ್ಟಕ್ಕೂ ಡಿ.ಕೆ.ರವಿ ಆತ್ಮಹತ್ಯೆ ನಡೆದಿದ್ದು ನಿಮ್ಮ ಅಧಿಕಾರಾವಧಿಯಲ್ಲಿ ಎಂಬುದು ನೆನಪಿರಲಿ" ಎಂದಿದೆ.
"ಮೋದಿ ನನ್ನನ್ನು ಸೋಲಿಸಿದರು, ಬಿಜೆಪಿ ನನ್ನ ಸೋಲಿಗೆ ಸಂಚು ನಡೆಸಿತು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಹತಾಶೆಯನ್ನು ಸೂಚಿಸುತ್ತಿದೆ. ಸುದೀರ್ಘ ಕಾಲ ಅಧಿಕಾರ ಅನುಭವಿಸಿದರೂ ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಕ್ಕೆ ಸ್ಪಂದಿಸದಿದ್ದ ಕಾರಣಕ್ಕೆ ಜನ ಕಲಿಸಿದ ಪಾಠವದು" ಎಂದು ಹೇಳಿದೆ.