ನವದೆಹಲಿ, ಅ.03 (DaijiworldNews/PY): "ರಾಜ್ಯದ ಎಲ್ಲರಿಗೂ ಡಿಸೆಂಬರ್ ಅಂತ್ಯದ ವೇಳೆಗೆ ಕೊರೊನಾ ಲಸಿಕೆ ನೀಡಲಾಗುವುದು" ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕುರಿತು ಚರ್ಚೆ ಮಾಡಲಾಗುತ್ತದೆ. ನವೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆ ಇದೆ" ಎಂದಿದ್ದಾರೆ.
"ಮಕ್ಕಳಿಗೆ ನವೆಂಬರ್ ವೇಳೆಗೆ ಲಸಿಕೆ ಸಿಗಬಹುದು. ಭಾರತ್ ಬಯೋಟೆಕ್ ಹಾಗೂ ಝೈಡಸ್ ಕ್ಯಾಡಿಲಾ ಲಸಿಕೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಝೈಡಸ್ ವ್ಯಾಕ್ಸಿನ್ ಬೆಲೆ ನಿರ್ಣಯ ಮಾಡಬೇಕಿದೆ" ಎಂದು ತಿಳಿಸಿದ್ದಾರೆ.
ಸಿರೋ ಸಮೀಕ್ಷೆ ಪ್ರಕಾರ, "ರಾಜ್ಯದ ಶೇ.60ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ. ಕೆಲವು ಕಡೆ ಶೇ.70ಕ್ಕೂ ಅಧಿಕ ಇದೆ. ರೂಪಾಂತರಿ ಕೊರೊನಾ ಬಗ್ಗೆ ಈಗಲೇ ಹೇಳುವುದು ಕಷ್ಟ. ನವೆಂಬರ್ ಅಥವಾ ಡಿಸೆಂಬರ್ವರೆಗೂ ಕಾದು ನೋಡಬೇಕು" ಎಂದಿದ್ದಾರೆ.