ನವದೆಹಲಿ, ಅ.03 (DaijiworldNews/PY): "ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅನೈತಿಕ ಸರ್ಕಾರವಾಗಿತ್ತು. ಹಾಗಾಗಿ ನಾನು ಕಾಂಗ್ರೆಸ್ ಬಿಟ್ಟು ಬಂದೆ" ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ಹೆಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಅನೈತಿಕ ಸರ್ಕಾರವಾಗಿತ್ತು. ಜೆಡಿಎಸ್ ವಿರುದ್ದ ಗೆದ್ದು ಅವರೊಂದಿಗೆ ಹೇಗೆ ಸರ್ಕಾರ ಮಾಡಲಿ? ಸಮ್ಮಿಶ್ರ ಸರ್ಕಾರವಾಗಿದ್ದಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಂದೆ" ಎಂದಿದ್ದಾರೆ.
"ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದರು. ಸಮ್ಮಿಶ್ರ ಸರ್ಕಾರ ರಚನೆಯ ಕುರಿತು ಎಲ್ಲಾ ನಿರ್ಧಾರವನ್ನು ಹೈಕಮಾಂಡ್ ಕೈಗೊಂಡಿತ್ತು. ಅಂತಹ ಸರ್ಕಾರದಲ್ಲಿ ಇರುವ ಬದಲು ಬಿಜೆಪಿಗೆ ಸೇರುವುದು ಸೂಕ್ತ ಎಂದು ನಿರ್ಧರಿಸಿದೆ" ಎಂದು ಹೇಳಿದ್ದಾರೆ.
"30-40 ವರ್ಷ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದ್ದರು. ಈಗ ಹೊಗಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಇರುವವರೆಲ್ಲಾ ಮೂಲ ಕಾಂಗ್ರೆಸ್ಸಿಗರಲ್ಲ. ಜನತಾ ಪರಿವಾರದಿಂದ ಬಂದವರೇ ಕಾಂಗ್ರೆಸ್ನಲ್ಲಿ ಹೆಚ್ಚು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.