ಬೆಂಗಳೂರು, ಅ.03 (DaijiworldNews/PY): "ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು 'ಕೊಲೆಗಡುಕ ಸರಕಾರ' ಎಂದಿದ್ದಾರೆ.
"ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರಕಾರ ಇಂಥವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ" ಎಂದು ಆರೋಪಿಸಿದ್ದಾರೆ.
"ಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೋನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೇರವಾಗಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ" ಎಂದಿದ್ದಾರೆ.