ಜಮ್ಮು, ಅ.03 (DaijiworldNews/PY): "ಸುಸ್ಥಿರ ಅಭಿವೃದ್ದಿ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯಲ್ಲಿ ದೃಢವಾದ ನಂಬಿಕೆ ಇಟ್ಟಿರುವುದಕ್ಕೆ ಭಾರತಕ್ಕಾಗಿ ಜಗತ್ತು ಎದುರು ನೋಡುತ್ತಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಹಲವು ವರ್ಷಗಳಿಂದ ಭಾರತವು ಪ್ರಜಾಪ್ರಭುತ್ವ ಹೊಂದಿದೆ. ಇದು ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಜೀವನ ಶೈಲಿಯಲ್ಲಿ ದೃಢವಾದ ನಂಬಿಕೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ದೇಶಗಳು ಇವುಗಳನ್ನು ಒತ್ತಿ ಹೇಳುತ್ತಿವೆ" ಎಂದಿದ್ದಾರೆ.
ಆರ್ಟಿಕಲ್ 370ರನ್ನು ರದ್ದುಗೊಳಿಸುವ ಕುರಿತು ಮಾತನಾಡಿದ ಅವರು, "ವ್ಯವಸ್ಥೆ ಬದಲಾಗಿದೆ. ಆದರೆ, ಅದು ಹೃದಯದಿಂದ ದೂರ ಹೋಗಿದೆಯೇ? ಕಾವೇರಿ ನದಿ ನೀರಿನ ಸಮಸ್ಯೆಯಂತೆ ರಾಜ್ಯಗಳು ಏಕೆ ಪರಸ್ಪರರ ವಿರುದ್ದ ಹೋರಾಡುತ್ತವೆ?" ಎಂದು ಪ್ರಶ್ನಿಸಿದ್ದಾರೆ.
"ನಾವೆಲ್ಲರೂ ಒಂದೇ. ವಿವಿಧ ಪ್ರದೇಶಗಳು, ಧರ್ಮಗಳು ಹಾಗೂ ನಂಬಿಕೆಗಳ ಆಧಾರದಲ್ಲಿ ನಾವು ವಿಭಿನ್ನ ವ್ಯವಸ್ಥೆಗಳನ್ನು ಹೊಂದಿರಬಹುದು. ನಾವು ವಿಭಿನ್ನವಾದ ಆಚರಣೆಗಳು ಹಾಗೂ ನಂಬಿಕೆಗಳನ್ನು ಹೊಂದಿದ್ದೇವೆ" ಎಂದಿದ್ದಾರೆ.