ಮುಂಬೈ, ಅ.03 (DaijiworldNews/PY): ಗೋವಾಕ್ಕೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಶನಿವಾರ ದಾಳಿ ನಡೆಸಿರುವ ಎನ್ಸಿಬಿ 10 ಮಂದಿಯನ್ನು ಬಂಧಿಸಿದೆ.
ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಎನ್ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭ ವೇಳೆ ಅಧಿಕಾರಿಗಳು ಕೊಕೇನ್, ಹಶೀಶ್ ಹಾಗೂ ಎಂಡಿಎಂಎ ಸೇರಿ ಹಲವು ರೀತಿಯ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಪ್ರಯಾಣಿಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, "ದಾಳಿಯ ಸಂದರ್ಭ ಕೆಲವು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, 8-10 ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದಿದ್ದಾರೆ.
ರೇವ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಇದ್ದಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.