ಬೆಂಗಳೂರು, ಅ.02 (DaijiworldNews/HR): ಕುಮಾರಸ್ವಾಮಿ ಎಚ್ಚರಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಇಂತಹ ಎಚ್ಚರಿಕೆಯನ್ನು ಬಹಳ ನೋಡಿದ್ದೇನೆ, ಆದರೆ ಹೆಚ್.ಡಿ.ಕೆ. ಹೇಳಿಕೆಗೆ ಪ್ರತಿಕ್ರಿಯಿಸಬಾರದೆಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಾನಗಲ್, ಸಿಂಧಗಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಜೆಡಿಎಸ್ ನವರು ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸಲು ಯತ್ನ ನಡೆಸಿದ್ದು, ಬಸವಕಲ್ಯಾಣ ಉಪ ಚುನಾವಣೆಯಲ್ಲೂ ಅದನ್ನೇ ಮಾಡಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಜೆಡಿಎಸ್ ನವರಿಗೆ ಮುಸ್ಲಿಂ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶಗಳನ್ನು ಕೊಡಲಿಲ್ಲ ? ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿಯವರು ನಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವರು ಯಾರೆಂದು ಎಚ್ಚರಿಕೆ ಕೊಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.