ನವದೆಹಲಿ, ಅ.02 (DaijiworldNews/PY): ನಾಥುರಾಮ್ ಗೂಡ್ಸೆ ಅವರನ್ನು ವೈಭವೀಕರಿಸುವವರ ವಿರುದ್ದ ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಎಂದಿಗಿಂತಲೂ ಭಾರತ ದೇಶ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆಧ್ಯಾತ್ಮಿಕ ಆಧಾರಗಳನ್ನು ಮಹಾತ್ಮ ಗಾಂಧಿ ಅವರು ತನ್ನ ಅಸ್ತಿತ್ವದ ಮೂಲಕ ಅಭಿವ್ಯಕ್ತಿಗೊಳಿಸಿದ್ದು, ನಮಗೆ ನೈತಿಕ ಅಧಿಕಾರವನ್ನು ನೀಡಿದ್ದರು. ಇಂದಿಗೂ ಅದು ದೊಡ್ಡ ಶಕ್ತಿಯಾಗಿ ನಮ್ಮೊಂದಿಗೆ ಉಳಿದಿದೆ" ಎಂದಿದ್ದಾರೆ.
ಗಾಂಧಿ ಜಯಂತಿಯಂದು ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡಿದವರು ಹಾಗೂ ಅದನ್ನು ಹಂಚಿಕೊಂಡು ಗೋಡ್ಸೆ ಪರ ಬರಹಗಳನ್ನು ಬರೆಯುವವರ ವಿರುದ್ದ ಕಿಡಿಕಾರಿದ್ದಾರೆ.
"ಕೆಲವು ಮಂದಿ ಗೋಡ್ಸೆ ಪರ ಬರೆದು ಬೇಜವಾಬ್ದಾರಿಯಿಂದ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.