ಬೆಂಗಳೂರು, ಅ.02 (DaijiworldNews/PY): "ಅ.3ರಂದು ನಡೆಯಲಿರುವ ಪ್ರಮುಖರ ಸಭೆಯಲ್ಲಿ ಉಪಚುನಾವಣೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉಪ ಚುನಾವಣೆ ನಡೆಯಲಿರುವ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಯನ್ನು ನಾಳೆ ನಡೆಯಲಿರುವ ಪ್ರಮುಖರ ಸಭೆಯಲ್ಲಿ ಆಯ್ಕೆ ಮಾಡಲಾಗುವುದು" ಎಂದಿದ್ದಾರೆ.
"ಪಕ್ಷದ ನೇತೃತ್ವದಲ್ಲೇ ಎರಡು ಉಪ ಚುನಾವಣೆಗಳನ್ನು ಎದುರಿಸಲಿದ್ದೇವೆ. ಉಪ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೇವೆ. ಕ್ಷೇತ್ರಗಳಲ್ಲಿ ಸದ್ಯಕ್ಕಿರುವ ವಾತಾವರಣದಲ್ಲಿ ಬಿಜೆಪಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ಭರವಸೆ ಇದೆ" ಎಂದು ತಿಳಿಸಿದ್ದಾರೆ.
"ಎರಡು ಕ್ಷೇತ್ರಗಳಲ್ಲಿ ಪ್ರತ್ಯೇಕವಾದ ಸಭೆಗಳನ್ನು ಮಾಡಿದ್ದೇವೆ. ನಾಳೆ ನಡೆಯಲಿರುವ ರಾಜ್ಯ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಹೆಸರು ಕಳುಹಿಸುತ್ತೇವೆ. ಚುನಾವಣೆಗೆ ಉಸ್ತುವಾರಿಗಳನ್ನು ಹಾಗೂ ಸಚಿವರನ್ನು ನೇಮಕ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗುವುದು" ಎಂದು ಹೇಳಿದ್ದಾರೆ.