ಬೆಂಗಳೂರು, ಅ.02 (DaijiworldNews/HR): ಬಿಜೆಪಿಯನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದ್ದು, ದೇಶದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ. ಮುಂದೆ ಪ್ರಾದೇಶಿಕ ಪಕ್ಷಗಳೇ ಬಿಜೆಪಿಗೆ ಪ್ರಬಲ ಎದುರಾಳಿಗಳಾಗಲಿವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷವು ಈಗ ಸಾಗುತ್ತಿರುವ ಹಾದಿಯನ್ನು ನೋಡಿದರೆ ಬಿಜೆಪಿಯವನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯನ್ನು ಕಾಂಗ್ರೆಸ್ ಪಡೆಯುವುದು ಕಷ್ಟ. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆಯೇ ಸ್ಪರ್ಧೆ ಇದರಲಿದೆ" ಎಂದರು.
ಇನ್ನು "ಕಾಂಗ್ರೆಸ್ ಪಕ್ಷವು ಪಂಜಾಬ್ನಲ್ಲಿ ಹೋಳಾಗಿದೆ. ಕರ್ನಾಟಕದಲ್ಲಿ ಒಂದಷ್ಟು ಶಕ್ತಿ ಇದೆ. ಆದರೆ ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳಿದೆ. ರಾಜ್ಯ ಕಾಂಗ್ರೆಸ್ನಲ್ಲೂ ಆಂತರಿಕ ಸಂಘರ್ಷವಿದ್ದು, 18 ತಿಂಗಳಲ್ಲಿ ಇಲ್ಲಿಯೂ ಏನಾದರೂ ಆಗಬಹುದು" ಎಂದಿದ್ದಾರೆ.
"ನಮ್ಮ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಸೇರಿದಂತೆ ಪಕ್ಷ ತೊರೆದಿರುವ ನಾಯಕರು ಇದ್ದಾಗಲೂ ಜೆಡಿಎಸ್ ಶಾಸಕರ ಸಂಖ್ಯೆ 50 ದಾಟಿರಲಿಲ್ಲ" ಎಂದು ಹೇಳಿದ್ದಾರೆ.