ಹುಬ್ಬಳ್ಳಿ, ಅ.02 (DaijiworldNews/PY): "ಬಲವಂತವಾಗಿ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ದ ಕಠಿಣ ಕಾನೂನು ಜಾರಿಗೆ ತರುವುದು ಅವಶ್ಯ" ಎಂದು ಶಾಸಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಅಧಿವೇಶನದ ಸಂದರ್ಭ ಶಾಕ ಗೂಳಿಹಟ್ಟಿ ಶೇಖರ ಅವರು ತಮ್ಮ ತಾಯಿಯ ಮತಾಂತರದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದು, ಎಲ್ಲರಿಗೂ ನೋವಾಗಿದೆ. ಇತ್ತೀಚೆಗೆ ಕೆಲ ಕ್ರಿಶ್ಚಿಯನ್ನರು ಮತಾಂತರ ಕಾರ್ಯದಲ್ಲಿ ಹೆಚ್ಚಾಗಿ ತೊಡಗಕೊಂಡಿರುವುದು ಸತ್ಯ" ಎಂದಿದ್ದಾರೆ.
"ದಲಿತ ಸಮುದಾಯದ ಮಂದಿ ಕ್ರಿಶ್ಚಿಯನ್ನರ ಮತಾಂತರಕ್ಕೆ ಬಲಿಯಾಗುತ್ತಿದ್ದಾರೆ. ಅಲ್ಲದೇ, ಇತ್ತೀಚೆಗೆ ಲಿಂಗಾಯತರು ಕೂಡಾ ಮತಾಂತರ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಮತಾಂತರ ಮಾಡುವವರ ವಿರುದ್ದ ಕಠಿಣ ಕಾನೂನು ಜಾರಿಗೆ ತರುತ್ತೇವೆ ಎಂದು ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ಕೂಡಾ ಹೇಳಿದ್ದಾರೆ" ಎಂದಿದ್ದಾರೆ.
"ತಾವೇ ಒಪ್ಪಿಕೊಂಡು ಜನರು ಬೇರೆ ಧರ್ಮಕ್ಕೆ ಹೋಗುವುದು ಬೇರೆಯಾಗುತ್ತದೆ. ಆದರೆ, ಇಲ್ಲಿ ಬಲವಂತವಾಗಿ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಬೀದರ್ ಸೇರಿದಂತೆ ಬೇರೆ ಕಡೆ ನಾವು ಹೋದಾಗ ಈ ಕುರಿತು ನಮಗೂ ದೂರುಗಳು ಬಂದಿವೆ. ಹಾಗಾಗಿ ಈ ಬಗ್ಗೆ ಗೃಹ ಮಂತ್ರಿಗಳು ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು" ಎಂದು ಹೇಳಿದ್ದಾರೆ.