ಮುಂಬೈ, ಅ 02 (DaijiworldNews/MS): ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಮುಜುಗರ ತಂದ 100 ಕೋಟಿ ರು ಹಫ್ತಾ ವಸೂಲಿ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ದೇಶದಿಂದ ಪಲಾಯನ ಮಾಡಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ತಕ್ಕಂತೆ ಪರಮ್ ಬೀರ್ ಸಿಂಗ್ ಇರುವಿಕೆ ಬಗ್ಗೆ ಮಾಹಿತಿಯಿಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಲ್ಸೆ ಹೇಳಿರುವುದು ಹಲವರ ಹುಬ್ಬೇರಿಸಿದೆ.
ಇನ್ನೊಂದೆಡೆ ಅವರ ವಿರುದ್ದ ಹೊರಡಿಸಲಾಗಿರುವ ವಾರಂಟ್ ಅನ್ನು ಪರಮ್ ಬೀರ್ ಸಿಂಗ್ ಅವರಿಗೆ ತಲುಪಿಸಲು ಸಿಐಡಿ ವಿಫಲವಾಗಿದ್ದು, ಅವರ ಅಧಿಕೃತ ವಿಳಾಸದಲ್ಲಿ ಅವರು ಪತ್ತೆಯಾಗಿಲ್ಲ. ಮುಂಬಯಿ ಮಹಾನಗರದ ಮಾಜಿ ಪೊಲೀಸ್ ಆಯುಕ್ತರಾಗಿರುವ ಪರಮ್ ಬೀರ್ ಅವರಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.
ಆದರೆ ಪರಮ್ ಬೀರ್ ಸಿಂಗ್ ಅವರು ದೇಶದಿಂದ ಪರಾರಿಯಾಗಿದ್ದಾರೆ ಎಂದು ಕೇಂದ್ರ ಸಂಸ್ಥೆಗಳು ನಮಗೆ ಅನಧಿಕೃತವಾಗಿ ತಿಳಿಸಿವೆ. ಲುಕ್ಔಟ್ ನೋಟಿಸ್ ಹೊರಡಿಸಿರುವಾಗ ದೇಶದಿಂದ ಹೊರ ಹೋಗುವುದು ಸಾಧ್ಯವಿಲ್ಲ. ಅವರು ಮೊದಲೇ ಪರಾರಿಯಾಗಿರಬೇಕು ಅಥವಾ ದೇಶ ತೊರೆಯಲು ಅಕ್ರಮ ಮಾರ್ಗ ಅನುಸರಿಸಿರಬೇಕು' ಎಂದು ಶುಕ್ರವಾರ ರಾಜ್ಯ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ನೇತೃತ್ವದಲ್ಲಿ ನಡೆದ ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಲಂಚದ ಆರೋಪ ಹೊರಿಸಿದ ಸಿಂಗ್ ಅವರನ್ನು ಹುಡುಕಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಯಾಗಿರುವುದರಿಂದ, ವಿದೇಶ ಪ್ರವಾಸಕ್ಕೆ ನಿರ್ಬಂಧಗಳಿವೆ. ಸರ್ಕಾರದ ಅನುಮತಿಯಿಲ್ಲದೆ ನೀವು ದೇಶವನ್ನು ತೊರೆಯಲು ಸಾಧ್ಯವಿಲ್ಲ. ಆದರೂ ಅವರು ದೇಶ ತೊರೆದಿದ್ದರೆ ಅದು ಒಳ್ಳೆಯದಲ್ಲ ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.