ನವದೆಹಲಿ, ಅ.02 (DaijiworldNews/PY): "ಪೂರ್ವ ಲಡಾಖ್ನಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ವಾಸ್ತವ ನಿಯಂತ್ರಣ ರೇಖೆಯ ಇನ್ನೊಂದಿ ಬದಿಯಲ್ಲಿ ಚೀನಾ ಗಣನೀಯ ಸೌಕರ್ಯವನ್ನು ನಿರ್ಮಿಸಿದೆ. ಯಾವುದೇ ವೇಳೆಯಲ್ಲಿ ಅದನ್ನು ಎದುರಿಸಲು ಭಾರತೀಯ ಪಡೆಗಳು ಸಿದ್ಧವಾಗಿವೆ" ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ತಿಳಿಸಿದ್ದಾರೆ.
ಪೂರ್ವ ಲಡಾಖ್ನ ಫಾರ್ವರ್ಡ್ ಪ್ರದೇಶಗಳ ಭದ್ರತಾ ಪರಿಶೀಲನೆ ನಡೆಸುತ್ತಿರುವ ಅವರು, "ಪೂರ್ವ ಲಡಾಖ್ನ ಗಡಿಯಲ್ಲಿ ಎಲ್ಲಾ ಚಲನವಲಗಳನ್ನು ಗಮನಿಸುತ್ತಿದ್ದೇನೆ. ಚೀನಾ ಹೆಚ್ಚಿನ ಸೈನ್ಯವನ್ನು ನಿಯೋಜಿಸಲು ತನ್ನ ಬದಿಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಾದ ಬೆದರಿಕೆಯನ್ನು ಎದುರಾಳಿಗಳು ನೀಡಿದ್ದಲ್ಲಿ ಸಮರ್ಥವಾಗಿ ಎದುರಿಸಲು ನಾವು ಸಿದ್ದರಿದ್ದೇವೆ. ನಾವು ಬಲಶಾಲಿಗಳು" ಎಂದು ಹೇಳಿದ್ದಾರೆ.
ಪರ್ವತ ಪ್ರದೇಶದಲ್ಲಿ ಚೀನಾದ ಜೊತೆ ದೀರ್ಘಕಾಲದ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸುವ ಸಲುವಾಗಿ ಎಂ ಎಂ ನರವಾಣೆ ಅವರು ಪೂರ್ವ ಲಡಾಖ್ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.
"ಈ ತಿಂಗಳ ಮಧ್ಯಭಾಗದಲ್ಲಿ 13ನೇ ಸುತ್ತಿನ ಮಾತುಕತೆಯನ್ನು ಚೀನಾ ಸೇನೆಯೊಂದಿಗೆ ನಡೆಸಲಿದ್ದು, ಎಲ್ಲಾ ಘರ್ಷಣೆ ಕೇಂದ್ರಗಳಿಂದ ಸೇನೆಯನ್ನು ಹಿಂಪಡೆದು ಸಮಸ್ಯೆ ಬಗೆಹರಿಸುವ ವಿಶ್ವಾಸದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.