ನವದೆಹಲಿ, ಅ.02 (DaijiworldNews/PY): ಭಾರತದಿಂದ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಕೂಡಾ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ ಎಂದು ಕ್ಯಾತೆ ತೆಗೆದ ಯುನೈಟೆಡ್ ಕಿಂಗ್ಡಮ್ಗೆ ಭಾರತ ರಂಟೈನ್ 'ತಿರುಗೇಟು' ನೀಡಿದೆ.
ಅ.4ರಿಂದ ಅನ್ವಯವಾಗುವಂತೆ ಯುಕೆಯಿಂದ ದೇಶಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಹತ್ತು ದಿನಗಳ ಕ್ವಾರಂಟೈನ್ ನಿಯಮ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆ ದೇಶದಿಂದ ಆಗಮಿಸುವವರಲ್ಲಿ ಲಸಿಕೆ ಪಡೆದವರು, ಪಡೆಯದವರು ಎನ್ನುವ ವರ್ಗೀಕರಣ ಮಾಡದೇ ನಿಯಮ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಪ್ರಯಾಣಕ್ಕೆ 72 ಗಂಟೆಗಳ ಮೊದಲು ನಡೆಸಲಾಗಿರುವ ಆರ್ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರವನ್ನು ಪ್ರಯಾಣಿಕರು ಹಾಜರುಪಡಿಸಬೇಕು ಎಂದು ತಿಳಿಸಿದೆ.
ಯುನೈಟೆಡ್ ಕಿಂಗ್ಡಮ್ ಸರ್ಕಾರ ಅ.4ರಿಂದ ಅನ್ವಯವಾಗುವಂತೆ ನಿಯಮಗಳಲ್ಲಿ ಬದಲಾವಣೆ ಮಾಡಿತ್ತು. ಇದರಲ್ಲಿ ಮಾನ್ಯತೆ ಪಡೆದ ಲಸಿಕೆಯ ಪಟ್ಟಿಗೆ ಕೋವಿಶೀಲ್ಡ್ ಅನ್ನು ಸೇರಿಸಿರಲಿಲ್ಲ. ಅಲ್ಲದೇ ಪ್ರಮಾಣಪತ್ರದ ವಿಚಾರಕ್ಕೂ ತಗಾದೆ ತೆಗೆದಿತ್ತು. ಕೇಂದ್ರ ಸರ್ಕಾರದ ಪ್ರಬಲ ಆಕ್ಷೇಪದ ಬಳಿಕ ಕೋವಿಶೀಲ್ಡ್ ಅನ್ನು ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಅಲ್ಲಿನ ಸರ್ಕಾರ ಪ್ರಮಾಣಪತ್ರದ ಬಗ್ಗೆ ಕ್ರಮ ತೆಗೆದುಕೊಳ್ಳಲೇ ಇಲ್ಲ. ಈ ಬಗ್ಗೆ ಪದೇ ಪದೇ ಮನವಿ ಮಾಡಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಇರುವ ಕಾರಣ ಕೇಂದ್ರ ಸರ್ಕಾರ ಕ್ವಾರಂಟೈನ್ ನಿಯಮವನ್ನು ಕಡ್ಡಾಯಗೊಳಿಸಿದೆ.
ದೇಶದಲ್ಲಿ 196 ದಿನಗಳಿಗೆ ಹೋಲಿಕೆ ಮಾಡಿದರೆ ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ ಸಕ್ರಿಯ ಸೋಂಕು ಸಂಖ್ಯೆ 2,75,224ಕ್ಕೆ ಇಳಿಕೆಯಾಗಿದೆ. ಇದು 2020ರ ಮಾರ್ಚ್ ನಂತರ ಕನಿಷ್ಠದ್ದು, ಇದೇ ಅವಧಿಯಲ್ಲಿ 26,727 ಹೊಸ ಸೋಂಕು ಪ್ರಕರಣ ದೃಢಪಟ್ಟಿದೆ. ಇದು ಶೇ.13ರಷ್ಟು ಹೆಚ್ಚಾಗಿದೆ.