ಲಕ್ನೋ, ಅ.02 (DaijiworldNews/PY): ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹೆಸರಿಸಿದೆ.
ಸಿಎಂ ಅವರ ಅಧಿಕೃತ ನಿವಾಸದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ನಟಿ ಕಂಗನಾ ರಣಾವತ್, ಯೋಜನೆಯ ಕುರಿತು ಚರ್ಚೆ ನಡೆಸಿದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಾಲ್, "ನಟಿ ಕಂಗನಾ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು. ಇನ್ನು ಮುಂದೆ ಕಂಗನಾ ರಣಾವತ್ ಅವರು ಒಡಿಒಪಿ ಯೋಜನೆಯ ರಾಯಭಾರಿ ಆಗಲಿದ್ದಾರೆ" ಎಂದು ಹೇಳಿದ್ದಾರೆ.
ಭೇಟಿಯ ಸಂದರ್ಭ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಡುತ್ತಿರುವ ಕಾರ್ಯಗಳನ್ನು ಕಂಗನಾ ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೆಟಿ ನೀಡುವಂತೆ ಸಿಎಂ, ಕಂಗನಾರ ಬಳಿ ವಿನಂತಿಸಿದರು ಎನ್ನಲಾಗಿದೆ.
ರಾಜ್ಯದ 75 ಜಿಲ್ಲೆಗಳಾದ್ಯಂತ ಉತ್ಪನ್ನ ಹಾಗೂ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.