ಮಂಡ್ಯ, ಅ.01 (DaijiworldNews/HR): ಯಾವುದೇ ಅಧಿಕಾರಿಯೂ ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇಲಾಖೆಗಳ ವಿಚಾರಗಳನ್ನೂ ಅಧಿಕಾರಿಗಳು ಮಾಧ್ಯಮಗಳ ಎದುರು ಹೇಳುವಂತಿಲ್ಲ. ಇಲಾಖೆ ವಿಚಾರ ತಿಳಿಸಲು ಆಯಾ ಇಲಾಖಗಳ ಸಚಿವರಿದ್ದಾರೆ. ಸರ್ಕಾರಕ್ಕೆ ಮುಜುಗರ ತರುವ ರೀತಿ ಮಾತನಾಡುವಂತಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಯಾವ ಅಧಿಕಾರಿಯೂ ಮಾಧ್ಯಮಕ್ಕೆ ಹೇಳಿಕೆ ನೀಡುವಂತಿಲ್ಲ.ಇಲಾಖೆಯ ಸಂಬಂಧಿಸಿದ ವಿಚಾರಗಳನ್ನೂ ಅಧಿಕಾರಿಗಳು ತಿಳಿಸುವಂತಿಲ್ಲ. ಒಬ್ಬ ಅಧಿಕಾರಿ ಇನ್ನೊಬ್ಬ ಅಧಿಕಾರಿಯ ಬಗ್ಗೆ ಕೂಡ ಮಾತನಾಡುವಂತಿಲ್ಲ"ಎಂದಿದ್ದಾರೆ.
ಮತಾಂತರ ವಿವಾದದ ಕುರಿತೂ ಪ್ರತಿಕ್ರಿಯಿಸಿದ ಅವರು, ಮತಾಂತರ ಎಂಬುದು ಹೀನ ಕೃತ್ಯ. ಹುಟ್ಟಿರುವ ಧರ್ಮದಲ್ಲಿ ಪೂಜೆ ಮಾಡುವುದು ಅವರ ಹಕ್ಕು. ವಿದೇಶದಿಂದ ಹಣ ತಂದು ಏಜೆಂಟ್ಗಳ ಮೂಲಕ ಹಸು, ಎಮ್ಮೆ ಕೊಡಿಸುತ್ತೇವೆಂದು ಆಮಿಷ ಒಡ್ಡುತ್ತಿದ್ದಾರೆ. ಲಕ್ಷಾಂತರ ಜನರನ್ನು ಮತಾಂತರ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಮತಾಂತರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ" ಎಂದರು.