ಬೆಂಗಳೂರು, ಅ.01 (DaijiworldNews/PY): "ಅಕ್ಟೋಬರ್ ತಿಂಗಳಿನಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ" ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಕ್ಕಳಲ್ಲಿ ಲಸಿಕೆ ಪ್ರಯೋಗ ಫೇಸ್ ಮೂರನೇ ಟ್ರಯಲ್ ಕೊನೆಯ ಹಂತ ತಲುಪಿದೆ. ಅಕ್ಟೋಬರ್ ತಿಂಗಳಿನಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ದರ ನಿಗದಿಯಾದ ಬಳಿಕ ಅಂತಿಮ ನಿರ್ಧಾರವಾಗಲಿದೆ" ಎಂದಿದ್ದಾರೆ.
"ಕೇಂದ್ರ ಸರ್ಕಾರ, ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಯಾವಾಗ ಬೇಕಾದರೂ ಘೋಷಣೆ ಮಾಡಬಹುದು. ಮಾರ್ಗಸೂಚಿಯ ಅನ್ವಯ ಈಗ ಶಾಲೆ ಪ್ರಾರಂಭವಾಗುತ್ತಿದೆ. ಶೇ.10ರಷ್ಟು ಮಕ್ಕಳಿಗೆ ಟೆಸ್ಟ್ ಮಾಡುವಂತೆ ಸೂಚಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಸಿನಿಮಾ ಥಿಯೇಟರ್ಗಳಲ್ಲಿ ಹೌಸ್ ಫುಲ್ಗೆ ಅವಕಾಶ ನೀಡಿದ್ದೇವೆ. ಇದನ್ನು ಹೊರತುಪಡಿಸಿದರೆ ಕೆಲವು ನಿರ್ಬಂಧಗಳಿವೆ. ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ನೀಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶವಿಲ್ಲ. ಸದ್ಯ ಈಜು ಕೊಳಕ್ಕೂ ಕೂಡಾ ಅನುಮಿತಿ ಇಲ್ಲ" ಎಂದು ಹೇಳಿದ್ದಾರೆ.
"ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿದೆ. ಈ ಹಿನ್ನೆಲೆ ಎರಡು ಗಡಿಯಲ್ಲಿ ಆರ್ಟಿಪಿಸಿಆರ್ ಪರೀಕ್ಷಾ ವರದಿ ತರುವುದು ಕಡ್ಡಾಯ" ಎಂದಿದ್ದಾರೆ.