ಬೆಂಗಳೂರು, ಅ 01 (DaijiworldNews/MS): ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆಗಾಗಿ ಸಾರ್ವಜನಿಕರ ಮೇಲೆ ದಾಖಲಾಗಿರುವ ದೂರುಗಳನ್ನು ಹಿಂಪಡೆಯುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಕೋವಿಡ್ 2019 ರ ಕಾರಣಗಳಿಂದಾಗಿ ಈಗಾಗಲೇ ಸಾರ್ವಜನಿಕರು ಆರ್ಥಿಕವಾಗಿ , ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದು , ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಕೋರ್ಟು ಕಚೇರಿಯ ಅಲೆದಾಟದಿಂದ ಮತ್ತಷ್ಟು ಸಮಸ್ಯೆಯಾಗುತ್ತದೆ. ಹಾಗಾಗಿ ಇದನ್ನು ಮನಗಂಡು ರಾಜ್ಯದಲ್ಲಿ ಕೋವಿಡ್ -19 ರ ನಿಯಮ ಉಲ್ಲಂಘನೆಯಡಿ ಸಾರ್ವಜನಿಕರ ಮೇಲೆ ದಾಖಲಾದ ಎಲ್ಲಾ ದೂರುಗಳನ್ನು ಹಿಂತೆಗೆಯಲು ಆದೇಶ ನೀಡುವಂತೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಶಾಸಕ ಕಾಮತ್ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುರಳೀಧರ್ ನಾಯಕ್, ರಮೇಶ್ ಹೆಗ್ಡೆ, ಭವಾನಿ ಶಂಕರ್, ಚರಿತ್ ಪೂಜಾರಿ ಉಪಸ್ಥಿತರಿದ್ದರು.