ಹಾಸನ, ಅ.01 (DaijiworldNews/PY): ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಯಿಂದ ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಯೋರ್ವರು 14 ಲಕ್ಷ ರೂ. ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ನಿಮಗೆ ಲಕ್ಕಿ ಡಿಪ್ ಬಂದಿದೆ ಎಂದು ಸ್ನೇಹ ಬೆಳೆಸಿದ್ದಾನೆ. ಅಲ್ಲದೇ ನಿಮಗೆ ದೊಡ್ಡ ಮೊತ್ತದ ಲೋನ್ ಕೊಡಿಸುತ್ತೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾನೆ. ಆದರೆ, ಸಾಲ ನೀಡಬೇಕಾದರೆ ನೀವು ಬೇರೆ ಖಾತೆಗಳನ್ನು ತೆರೆದು ಆ ಖಾತೆಯ ಎಟಿಎಂ, ಪಾಸ್ ಬುಕ್ ಹಾಗೂ ಹೊಸ ಸಿಮ್ ಖರೀದಿಸಿ ಅವುಗಳನ್ನು ನನಗೆ ಕಳುಹಿಸಿ ಎಂದು ನಾಮ ಹಾಕಿದ್ದಾನೆ.
ವ್ಯಕ್ತಿ ಹೇಳಿದ ಮಾತನ್ನು ಮಹಿಳೆ ಚಾಚೂ ತಪ್ಪದೇ ಪಾಲಿಸಿದ್ದು, ಮಹಿಳೆ ತನ್ನ ಸಂಬಂಧಿಗಳಿಂದ ಬೇರೆ ಬ್ಯಾಂಕ್ ಖಾತೆ ಓಪನ್ ಮಾಡಿಸಿ, ಎಲ್ಲಾ ದಾಖಲೆಗಳನ್ನು ವಂಚಕನಿಗೆ ಕಳುಹಿಸಿದ್ದಾಳೆ. ಅಲ್ಲದೇ, ವಂಚಕ ಹಣ ಕೇಳಿದಾಗಲೆಲ್ಲಾ ಖಾತೆಗೆ ಹಣ ಹಾಕಿದ್ದು, ಮಹಿಳೆ ಬರೋಬ್ಬರಿ 14 ಲಕ್ಷ ರೂ. ಕಳೆದುಕೊಂಡಿದ್ದಾಳೆ.
ಈ ಬಗ್ಗೆ ಹಾಸನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪೊಲೀಸರಿಗೆ ಆರೋಪಿಯ ಸುಳಿವು ಪತ್ತೆ ಹಚ್ಚುವುದೇ ಸವಾಲಾಗಿದೆ.
"ಈ ರೀತಿಯಾದ ಘಟನೆ ನಡೆದ 24 ಗಂಟೆಗಳ ಒಳಗೆ ಪೊಲೀಸರಿಗೆ ತಿಳಿಸಿದ್ದಲ್ಲಿ ಮಾತ್ರವೇ ಹಣ ಆರೋಪಿಗಳ ಕೈಸೇರುವುದನ್ನು ತಪ್ಪಿಸಬಹುದು" ಎಂದು ಹಾಸನ ಎಸ್ಪಿ ಎಚ್ಚರಿಸಿದ್ದಾರೆ.