ಬೆಂಗಳೂರು, ಅ 01 (DaijiworldNews/MS): ನಟಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಆತ್ಮಹತ್ಯೆ ಪ್ರಕರಣ ಹಿಂದೆ ಹಲವು ಅನುಮಾನಗಳೂ ಹುಟ್ಟಿಕೊಂಡಿದ್ದುಸೌಜನ್ಯ ಗೆಳೆಯ ಕಿರುತೆರೆ ನಟ ವಿವೇಕ್ ಹಾಗೂ ಮೇಕಪ್ ಬಾಯ್ ಮಹೇಶ್ ವಿರುದ್ಧ ಕುಂಬಳಗೋಡು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೃತ ಸೌಜನ್ಯಾ ತಂದೆ ಪ್ರಭು ಮಾದಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಿರುತೆರೆ ನಟ ವಿವೇಕ್ ಹಾಗೂ ಮೇಕಪ್ ಬಾಯ್ ಮಹೇಶ್ ನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯ ಪ್ರತಿ ಚಲನವಲಗಳ ಬಗ್ಗೆ ಹಾಗೂ ಬ್ಯಾಂಕ್ ವ್ಯವಹಾರದ ಬಗ್ಗೆ ಮಹೇಶ್ ಗೆ ಇಂಚಿಂಚು ಮಾಹಿತಿ ಇತ್ತು ಎನ್ನಲಾಗಿದೆ.
ಸೌಜನ್ಯ ಅವರ ತಂದೆ ಪ್ರಭು ಮಾದಪ್ಪ ದೂರು ನೀಡಿದ್ದು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟನೆ ಮಾಡುವ ಸಂಬಂಧ ನನ್ನ ಮಗಳು ಐದು ವರ್ಷದಿಂದಲೂ ಬೆಂಗಳೂರಿನಲ್ಲಿದ್ದಳು. ಎರಡು ವರ್ಷದಿಂದ ಸನ್ವರ್ಥ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ನನ್ನ ಮಗಳಿಗೆ ವಿವೇಕ್ ಎಂಬಾತ ಪರಿಚಯವಾಗಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದ. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಮಹೇಶ್ ಕಾರಣ. ಇವರ ಕಿರುಕುಳ ತಾಳಲಾರದೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರ್ಥಿಕವಾಗಿ ಅವಳಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಅವಳ ಬಳಿ ಆರು ಲಕ್ಷ ರೂ. ಹಣವಿತ್ತು. ಎರಡು ದಿನದ ಹಿಂದಷ್ಟೇ ನಾನೇ ಒಂದು ಲಕ್ಷ ರೂ. ಹಣವನ್ನು ಕೊಟ್ಟು ಕಳಿಸಿದ್ದೆ ಎಂದು ಮೃತ ಸೌಜನ್ಯಾಳ ತಂದೆ ಪ್ರಭು ಮಾದಪ್ಪ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರನ್ನು ಆಧರಿಸಿಯೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.