ನವದೆಹಲಿ, ಅ.01 (DaijiworldNews/PY): "ಸೂಕ್ತ ತರಬೇತಿಯ ಜೊತೆಗೆ ಭವಿಷ್ಯದ ಯುದ್ಧಕ್ಕೆ ಸಜ್ಜುಗೊಳ್ಳಲು ನಾವು ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದಿದ್ದೇವೆ" ಎಂದು ವಾಯುಸೇನೆಯ ಮುಖ್ಯಸ್ಥ ವಿವೇಕ್ ರಾಮ್ ಚೌದರಿ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ವಾಯುಪಡೆಯನ್ನು ಬಳಸಿಕೊಂಡು ದೇಶ ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ" ಎಂದಿದ್ದಾರೆ.
"ವಾಯು ಸೇನೆಯ ಸಿಬ್ಬಂದಿಗಳನ್ನು ಭವಿಷ್ಯದ ಯುದ್ಧಕ್ಕೆ ಪ್ರೇರೇಪಿಸುವುದು. ಆತ್ಮನಿರ್ಭರ ಭಾರತದಲ್ಲಿ ಭಾರತೀಯ ಸೇನೆಯು ಎಲ್ಲಾ ಆತ್ಮಗೌರವಗಳೊಂದಿಗೆ ಸ್ವಾಲಂಭಿಯಾಗಲು ಮಹತ್ವದ ಹೆಜ್ಜೆ ಇಡಲಾಗುತ್ತದೆ. ಗಡಿಯಲ್ಲಿ ಎದುರಾಗುವ ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸಲು ನಾವು ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದಿದ್ದೇವೆ" ಎಂದು ಹೇಳಿದ್ದಾರೆ.
"ಇರುವ ಸಲಕರಣೆಗಳನ್ನು ಬಳಕೆ ಮಾಡಿಕೊಂಡು ನಮ್ಮ ಮಾನವ ಸಂಪನ್ಮೂಲಕ್ಕೆ ಸರಿಯಾದ ತರಬೇತಿ ನೀಡಬೇಕಿದೆ. ವಾಯುಸೇನೆ 83 ಲಘು ಯುದ್ಧ ವಿಮಾನಗಳು, ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನಗಳು ಹಾಗೂ ಎಂಕೆ2 ಲಘು ಯುದ್ಧ ವಿಮಾನಗಳನ್ನು ಖರೀದಿಸಲು ವಾಯುಸೇನೆ ಒಪ್ಪಂದಕ್ಕೆ ಸಹಿ ಹಾಕಿದೆ" ಎಂದು ತಿಳಿಸಿದ್ದಾರೆ.
"ಮುಂಬರುವ ದಿನಗಳಲ್ಲಿ ಆತ್ಮನಿರ್ಭರ ಭಾರತದ ಅಡಿ ನಮಗೆ ಅವಶ್ಯಕವಾದ ಸಲಕರಣೆಗಳನ್ನು ಖರೀದಿ ಮಾಡಲು ಆದ್ಯತೆ ನೀಡಲಾಗುವುದು" ಎಂದಿದ್ದಾರೆ.