ಶಿವಮೊಗ್ಗ, ಅ.01 (DaijiworldNews/PY): "ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಹುಚ್ಚು ಹಿಡಿದಿದೆ" ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ನವರದ್ದು ತಾಲಿಬಾನ್ ಸಂಸ್ಕೃತಿ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಕೆಲವರಿಗೆ ಅರ್ಧ ಹುಚ್ಚು ಇರುತ್ತದೆ. ಆದರೆ, ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಯಾವಾಗ ಹುಚ್ಚು ಕಡಿಮೆ ಆಗುತ್ತದೋ ಆವಾಗ ನಾನು ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ" ಎಂದಿದ್ದಾರೆ.
"ಸಿಎಂ ಸ್ಥಾನ ಕಳೆದುಕೊಂಡ ಬಳಿಕ ಸಿದ್ದರಾಮಯ್ಯ ಅವರಿಗೆ ಪೂರ್ತಿ ಹುಚ್ಚು ಹಿಡಿದಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಅವರಿಬ್ಬರ ನಡುವೆ ಯುದ್ಧ ನಡೆಯುತ್ತಿದೆ" ಎಂದು ಲೇವಡಿ ಮಾಡಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಎದುರಿಸಲಿದ್ದೇವೆ. ಹೈಕಮಾಂಡ್ ಶೀಘ್ರದಲ್ಲೇ ಹಾನಗಲ್, ಸಿಂದಗಿ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಸೂಚಿಸಲಿದೆ" ಎಂದು ತಿಳಿಸಿದ್ದಾರೆ.