ತಿರುವನಂತಪುರಂ, ಅ.01 (DaijiworldNews/HR): ತರಗತಿಯಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಮೇಲೆ ಶಿಕ್ಷಕಿಯೊಬ್ಬರು ಪೆನ್ ಎಸೆದಿದ್ದು, ಪೆನ್ ನೇರವಾಗಿ ವಿದ್ಯಾರ್ಥಿಯ ಕಣ್ಣಿಗೆ ಬಿದ್ದು ದೃಷ್ಟಿ ದೋಷ ಕಳೆದುಕೊಂಡಿದ್ದಕ್ಕೆ ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಕೇರಳದ ತಿರುವನಂತಪುರಂ ಪೊಕ್ಸೊ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಕಂದಾಲ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ತುಂಗಂಪರಾ ನಿವಾಸಿ ಶೆರಿಫ್ ಶಹಜಹಾನ್ ಎಂದು ಗುರುತಿಸಲಾಗಿದೆ.
ಪೊಕ್ಸೊ ಕೋರ್ಟ್ ಜಡ್ಜ್ ಕೆ.ವಿ. ರಾಜನೀಶ್ ತೀರ್ಪು ಪ್ರಕಟಿಸಿದ್ದು, ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂ. ದಂಡ ವಿಧಿಸಿದೆ. ಒಂದು ದಂಡ ಕೊಡದೇ ಹೋದರೆ, ಹೆಚ್ಚುವರಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಅರೆಬಿಕ್ ಕ್ಲಾಸ್ ತೆಗೆದುಕೊಂಡಿದ್ದ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಮಾತನಾಡುವುದನ್ನು ಶಿಕ್ಷಕಿ ಗಮನಿಸಿದ್ದರು. ತರಗತಿಗೆ ತೊಂದರೆಯಾಗಿದ್ದರಿಂದ ಬಾಲ್ ಪೆನ್ ಅನ್ನು ವಿದ್ಯಾರ್ಥಿಯ ಮೇಲೆ ಎಸೆದಿದ್ದರು. ಪೇನ್ ನೇರವಾಗಿ 8 ವರ್ಷದ ವಿದ್ಯಾರ್ಥಿಯ ಕಣ್ಣಿಗೆ ಚುಚ್ಚಿಕೊಂಡಿತ್ತು. ಇದರಿಂದಾಗಿ ವಿದ್ಯಾರ್ಥಿ ತನ್ನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ.