ಮುಂಬೈ, ಅ.01 (DaijiworldNews/HR): ಮುಂಬೈನ ಅಂಧೇರಿಯಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗೆ ದಂಡ ಪಾವತಿಸುವಂತೆ ಕಾರಿಗೆ ಅಡ್ಡ ಹಾಕಿ ಬಾನೆಟ್ ಮೇಲೆ ಕುಳಿತ ಟ್ರಾಫಿಕ್ ಪೊಲೀಸ್ ಒಬ್ಬರನ್ನು 1ಕಿ.ಮೀ ವರೆಗೂ ಚಾಲಕನೊಬ್ಬ ಎಳೆದೊಯ್ದ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ನೀಡಿದ ಅಧಿಕಾರಿ, ಅಂಧೇರಿಯ ಅಜಾದ್ನಗರ ಮೆಟ್ರೋ ನಿಲ್ದಾಣದ ಕೆಳಗೆ ಕಾನ್ಸ್ಸ್ಟೇಬಲ್ ವಿಜಯ್ಸಿಂಗ್ ಗುರವ್(48) ಕರ್ತವ್ಯದಲ್ಲಿದ್ದ ವೇಳೆ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಕಾರನ್ನು ತಡೆದು ದಂಡ ಪಾವತಿಸುವಂತೆ ತಿಳಿಸಿದ್ದಾರೆ. ಆದರೆ ಐಡಿಯೊಂದನ್ನು ತೋರಿಸಿ ವ್ಯಕ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಕಾರಿನ ವೇಗವನ್ನು ಹೆಚ್ಚಿಸಿದಾಗ ಕಾನ್ಸ್ಸ್ಟೇಬಲ್ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾರೆ. ಆಗ ಚಾಲಕ ಸುಮಾರು ಒಂದು ಕಿ.ಲೋ ಮೀಟರ್ವರೆಗೂ ವಾಹನ ಚಲಾಯಿಸಿ ಬಾನೆಟ್ ಮೇಲಿದ್ದ ಕಾನ್ಸ್ಸ್ಟೇಬಲ್ರನ್ನು ಎಳೆದೊಯ್ದಿದ್ದಾನೆ.
ಇನ್ನು ಪೊಲೀಸ್ ಠಾಣೆಗೆ ಆಗಮಿಸಿ ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 353(ಸಾರ್ವಜನಿಕ ಸೇವೆ ವೇಳೆ ಕರ್ತವ್ಯಕ್ಕೆ ಅಡ್ಡಿ) ಮತ್ತು 279 (ರಾಶ್ ಡ್ರೈವಿಂಗ್)ಗೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆಯ ವೀಡಿಯೋವನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.