ಮೈಸೂರು, ಅ 01 (DaijiworldNews/MS):ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅರೆಸ್ಸೆಸ್ ಬಗ್ಗೆ ತಿಳಿಯಬೇಕೆಂದರೆ ಶಾಖೆಗೆ ಬರಲಿ. ಅವರಿಗೆ ತಿಳಿಯುತ್ತಿಲ್ಲ ಅಂದ್ರೆ ನಾನೇ ಬೇಕಾದರೆ ಕರೆದುಕೊಂಡು ಹೋಗುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ತಾವು ಏನು ಮಾತನಾಡುತ್ತಿದ್ದಾರೆ ಎಂಬುವುದು ಗೊತ್ತಾಗುವುದಿಲ್ಲ. ಅವರಿಗೆ ಕೋವಿಡ್ ಬಂದ ಬಳಿಕ ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿಯೂ ಗೊತ್ತಿಲ್ಲ. ಯಾವುದೇ ಸಂಬಂಧವಿಲ್ಲದೆ ಯಾವುದರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೇಕಾದರೆ ತಿಳಿದುಕೊಂಡು ಅಗತ್ಯವಿದ್ದರೆ ನಾನು ನಿಮಗೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಮೈಸೂರು ದಸರಾ ತಯಾರಿ ಕುರಿತಾಗಿ ಮಾತನಾಡಿದ ಸಚಿವರು , ದಸರಾಗೆ ಅಂತಿಮ ತಯಾರಿಗಳು ಭರದಿಂದ ಸಾಗುತ್ತಿದೆ. ಇಂದು ಸಂಜೆಯೊಳಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಗಲಿದೆ. ಹಂಸಲೇಖ ಸೇರಿದಂತೆ ನಾಡಿನ ಹಲವು ಕಲಾವಿದರಿಂದ ಕಾರ್ಯಕ್ರಮವಿದೆ. ಉದ್ಘಾಟನೆಗೆ 500 ಹಾಗೂ ಜಂಬೂ ಸವಾರಿಗೆ 1000 ಜನರಿಗೆ ಅವಕಾಶ ನೀಡಬೇಕೆಂದು ಎಂದು ತಜ್ಞರ ಸಮಿತಿ ಹೇಳಿದೆ ಎಂದು ಮಾಹಿತಿ ನೀಡಿದರು.