ತಿರುವನಂತಪುರ, ಅ.01 (DaijiworldNews/PY): "ಕೇರಳದಲ್ಲಿ ಸಿಎಎ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವುದಿಲ್ಲ" ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ಸಿಎಎ ಕಾಯ್ದೆಯನ್ನು ಕೇರಳದಲ್ಲಿ ಕಾರ್ಯರೂಪಕ್ಕೆ ತರುವುದಿಲ್ಲ. ಇದು ಆರಂಭದಿಂದಲೂ ಎಡಪಕ್ಷದ ಸರ್ಕಾರದಿಂದ ಕೈಗೊಂಡ ತೀರ್ಮಾನವಾಗಿದೆ. ಇದರಲ್ಲಿ ಯಾವುದೇ ರೀತಿಯಾದ ಬದಲಾವಣೆ ಇಲ್ಲ" ಎಂದಿದ್ದಾರೆ.
"ಕೇಂದ್ರ ಸರ್ಕಾರವು ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸುವ ಸಲುವಾಗಿ ಸಿಎಎಯನ್ನು ತಂದಿದೆ. ಈ ಬಗ್ಗೆ ಎಡ ಪಕ್ಷಗಳ ನಿಲುವು ಎಂದಿಗೂ ಒಂದೇ. ಕೇರಳದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರುವುದಿಲ್ಲ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ" ಎಂದು ತಿಳಿಸಿದ್ದಾರೆ.
"ಒಂದು ಧರ್ಮಕ್ಕೆ ಸೇರಿದ ಕಾರಣವನ್ನು ಮುಂದಿಟ್ಟುಕೊಂಡು ಪೌರತ್ವವನ್ನು ತೀರ್ಮಾನ ಮಾಡಲು ಆಗುವುದಿಲ್ಲ. ಧರ್ಮಗಳಲ್ಲಿ ನಂಬಿಕೆ ಇಡುವುದು ಹಾಗೂ ಇಡದೇ ಇರುವುದು ಪ್ರತಿಯೋರ್ವನ ಹಕ್ಕು. ನಮ್ಮ ರಾಷ್ಟ್ರದಲ್ಲಿ ಧರ್ಮಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.