ಹುಬ್ಬಳ್ಳಿ, ಅ.01 (DaijiworldNews/PY): "ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡುವುದನ್ನು ಶೀಘ್ರವೇ ನಿಲ್ಲಿಸಬೇಕು" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಅಜಾನ್ ಮಾಡುವುದನ್ನು ಶೀಘ್ರವೇ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಶ್ರೀರಾಮ ಸೇನೆಯಿಂದ ಧ್ವನಿವರ್ಧಕ ತೆರವು ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇದರಿಂದ ನಿಶಬ್ಧ ವಲಯಗಳಲ್ಲಿ ಶಬ್ಧ ಮಾಲಿನ್ಯವಾಗುತ್ತಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೂಡಾ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
"ಧಾರ್ಮಿಕ ಕಟ್ಟಡಗಳ ತೆರವು ಮಾಡುವುದರಲ್ಲೂ ಅನಧಿಕೃತ ದರ್ಗಾ ಹಾಗೂ ಮಸೀದಿಗಳನ್ನು ತೆರವು ಮಾಡಲಿಲ್ಲ. ಸೂಕ್ಷ್ಮ ವಿಚಾರ ಎಂದು ಕೋರ್ಟ್ ನಿಯಮವನ್ನೇ ಉಲ್ಲಂಘಿಸಿ ದೇಶದಲ್ಲಿ ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ. ಈ ರೀತಿ ಮಾಡುವುದಾದರೆ ಪೊಲೀಸ್ ಠಾಣೆ, ಕೋರ್ಟ್ಗಳನ್ನು ಮುಚ್ಚಿ" ಎಂದಿದ್ದಾರೆ.
"ಗೋಹತ್ಯೆ ನಿಷೇಧ ಕಾನೂನು ರೂಪಿಸಿದರೂ ಕೂಡಾ ಗೋಹತ್ಯೆ ಮಾತ್ರ ನಿಂತಿಲ್ಲ. ಗೋಹತ್ಯೆ ತಡೆಯುವ ಹಿಂದೂ ಕಾರ್ಯಕರ್ತರು ಮಾತ್ರವೇ ಕಾಣಿಸುತ್ತಿದ್ದಾರೆ. ಗೋಹತ್ಯೆಯನ್ನು ಏಕೆ ತಡೆಯುವುದಿಲ್ಲ? ಪೊಲೀಸರು ಏನು ಕತ್ತೆ ಕಾಯುತ್ತಿದ್ದಾರೆಯೇ?" ಎಂದು ಕೇಳಿದ್ದಾರೆ.