ಬೆಂಗಳೂರು, ಸೆ.30 (DaijiworldNews/PY): "ಹೆಣ್ಣಿನ ಬಗ್ಗೆ ಗೌರವವೇ ಇಲ್ಲದೆ ಮಾತನಾಡುವ ಬಿಜೆಪಿಯವರು ವಾಸ್ತವವಾಗಿ ಸಂಸ್ಕೃತಿಯ ರಕ್ಷಕರಲ್ಲ..ಸಂಸ್ಕೃತಿಯ ಭಂಜಕರು" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಆಡಿರುವ ಮಾತು ಅಸಹ್ಯದ ಪರಮಾವಧಿ. ಇದು ಬಿಜೆಪಿಯವರ ಕೀಳು ಮನಸ್ಥಿತಿಯ ಅನಾವರಣ. ಸಿ ಟಿ ರವಿಯವರು ಆರ್ಎಸ್ಎಸ್ ಎಂಬುವುದು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಗರಡಿ ಮನೆ ಎಂದಿದ್ದಾರೆ. ಹಾಗಾದರೆ ಆರ್ಎಸ್ಎಸ್ ಗರಡಿ ಮನೆಯಲ್ಲಿ ಬಿಜೆಪಿ ನಾಯಕರು ಕಲಿಯುವುದು ಈ ಸಂಸ್ಕಾರವನ್ನೇ?ಹೇಳಿ ಸಿ ಟಿ.ರವಿಯವರೆ?" ಎಂದು ಪ್ರಶ್ನಿಸಿದ್ದಾರೆ.
"ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡುವುದು, ಅಸಭ್ಯ ಪದಗಳ ಬಳಸುವುದು ಆರ್ಎಸ್ಎಸ್ ಗರಡಿ ಮನೆಯ ಬಳುವಳಿ ಎನ್ನುವುದಾದರೇ ಸಂಸ್ಕೃತಿ ಹಾಗೂ ಸಂಸ್ಕಾರ ಎಂಬ ಪದಗಳ ಪಾರಿಭಾಷೆ ಬದಲಿಸಬೇಕು. ಹೆಣ್ಣಿನ ಬಗ್ಗೆ ಗೌರವವೇ ಇಲ್ಲದೆ ಮಾತನಾಡುವ ಬಿಜೆಪಿಯವರು ವಾಸ್ತವವಾಗಿ ಸಂಸ್ಕೃತಿಯ ರಕ್ಷಕರಲ್ಲ..ಸಂಸ್ಕೃತಿಯ ಭಂಜಕರು" ಎಂದಿದ್ದಾರೆ.
'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ' ಎಂದು ನಂಬಿರುವ ಸಂಸ್ಕೃತಿ ನಮ್ಮದು. ಈ ದೇಶದ ಮಣ್ಣು ಹೆಣ್ಣಿಗೆ ದೇವತೆಯ ಸ್ಥಾನ ಕಲ್ಪಿಸಿದೆ. ಆದರೆ ಹೆಣ್ಣನ್ನು ಕೀಳಾಗಿ ಕಾಣುವ, ಆಕೆಯ ಬಗ್ಗೆ ಅಸಹ್ಯದ ಮಾತನಾಡುವ ಬಿಜೆಪಿಯವರೆ ನಿಮ್ಮ ಸಂಸ್ಕೃತಿ ಯಾವುದು ಎಂದು ಹೇಳುವಿರಾ? ಎಂದು ಕೇಳಿದ್ದಾರೆ.