ಬಿಡದಿ, ಸೆ 30 (DaijiworldNews/MS): ಇಂದು ದೇಶದ ಮತ್ತು ರಾಜ್ಯದ ಯುವಕರಿಗೆ ಬೇಕಾಗಿರುವುದು ಉದ್ಯೋಗ, ಅವಲಂಬಿತರನ್ನು ಬೆಂಬಲಿಸುವ ಶಕ್ತಿ, ಆದರೆ ಭಾರತೀಯ ಜನತಾ ಪಾರ್ಟಿಯೂ ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಆರೋಪಿಸಿದ್ದಾರೆ.
ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು " ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಜೆಡಿ(ಎಸ್) ತನ್ನ "ಮಿಷನ್ 123 ಸ್ಥಾನಗಳ" ಭಾಗವಾಗಿ ಯುವ ಶಕ್ತಿಯನ್ನು ಸದೃಢ ಮಾಡುವತ್ತ ಗಮನ ಹರಿಸುತ್ತಿದೆ ಎಂದು ಹೇಳಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು, ಆದರೆ ನಿರುದ್ಯೋಗದ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿದೆ. ಯುವಕರಿಗೆ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ಕೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು
ಯಾವುದೇ ಸರ್ಕಾರಿ ಕೆಲಸಗಳಿಗೆ ನೇಮಕಾತಿಗಳು ನಿಂತು ಹೋಗಿದೆ . ಇನ್ನೊಂದೆಡೆ ಕೊವೀಡ್ ಸಾಂಕ್ರಮಿಕದಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಬಿಜೆಪಿಗೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣವೇ ಮುಖ್ಯ ಪ್ರಚಾರವಾಗಿದೆ. ಅವರು ಹಿಂದುತ್ವದ ಹೆಸರಿನಲ್ಲಿ ದೇಶದ ಯುವಕರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.