ಮುಂಬೈ, ಸೆ 30 (DaijiworldNews/MS): ಮುಂಬೈನ ಪ್ಯಾರೆಲ್ನ ಕೆಇಎಂ ಯಲ್ಲಿ ವ್ಯಾಸಂಗ ಮಾಡುತ್ತಿರುವ ಕನಿಷ್ಠ 29 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಕೆಇಎಂ ಡೀನ್ ಡಾ.ಹೇಮಂತ್ ದೇಶಮುಖ ಅವರು ದೃಢಪಡಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಲಕ್ಷಣರಹಿತರು ಅಥವಾ ಸ್ವಲ್ಪ ರೋಗಲಕ್ಷಣದವರು ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ಸೋಂಕು ತಗುಲಿದ ಇಬ್ಬರು ವಿದ್ಯಾರ್ಥಿಗಳನ್ನು ನಗರದ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳು ಕ್ವಾರಂಟೈನ್ ನಲ್ಲಿ ಇರಲು ತಿಳಿಸಲಾಗಿದೆ. ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಒಟ್ಟಾರೇ, 1,100 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಾರೆ.
29 ವಿದ್ಯಾರ್ಥಿಗಳ ಪೈಕಿ ಕೊರೊನಾ ವೈರಸ್ ಲಸಿಕೆಯ ಡೋಸ್ ಪಡೆದ 27 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೊರೊನಾ ವೈರಸ್ ಸೋಂಕು ದೃಢಪಟ್ಟ 27 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿಯ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಉಳಿದ ನಾಲ್ಕು ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಲೇಜಿನಲ್ಲಿ ನಡೆದ ಕೆಲ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಿಂದ ಸೋಂಕು ಹರಡಿರುವ ಸಾಧ್ಯತೆಯಿರುವುದಾಗಿ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.